ಬೆಂಗಳೂರು:ರಾಜಧಾನಿಯಲ್ಲಿ ಪ್ರಸಕ್ತ ತಿಂಗಳಲ್ಲಿ ಅಧಿಕ ಮಳೆ ಸುರಿದಿರುವುದು ದಾಖಲೆಯಾಗಿದೆ. ಮೇ 1ರಿಂದ ಮೇ 26ರವರೆಗೆ 307 ಮಿಮೀ ಮಳೆಯಾಗುವ ಮೂಲಕ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ. 2023ರ ಮೇನಲ್ಲಿ 305 ಮಿಮೀ ಮಳೆಯಾಗಿತ್ತು.
ಮುಂಗಾರು ಪ್ರವೇಶಕ್ಕೂ ಮುನ್ನ ನಗರದಲ್ಲಿ ಸಾಧಾರಣ ಮಳೆಯಾಗುತ್ತಿತ್ತು. ಮುಂಗಾರು ಶುರುವಾದ ಬಳಿಕ ಜೂನ್ನಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ನಗರಕ್ಕೆ ವಾಡಿಕೆಗಿಂತ ಮುಂಚಿತವಾಗಿ ಮಾನ್ಸೂನ್ ಪ್ರವೇಶಿಸಿದೆ. ಮೇ ತಿಂಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಟ್ರಫ್ (ತೇವಾಂಶ ಮೋಡ) ಇದ್ದ ಕಾರಣ ಜಾಸ್ತಿ ಮಳೆ ಸುರಿಯಲು ಸಾಧ್ಯವಾಗಿದೆ. ಮಾ.1ರಿಂದ ಮೇ 26ರವರೆಗೆ ವಾಡಿಕೆಯಂತೆ ನಗರದಲ್ಲಿ 130 ಮಿಮೀ ಮಳೆಯಾಗಬೇಕಿತ್ತು. ಆದರೆ, 293 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.125 ಅಧಿಕವಾಗಿ ಸುರಿದಿದೆ.
ಜೂ 1ರಿಂದ ಸೆ.30ರವರೆಗಿನ ಅವಧಿಯನ್ನು ನೈಋತ್ಯ ಮಾನ್ಸೂನ್, ಅ.1ರಿಂದ ಡಿ.31ರವರೆಗಿನ ಅವಧಿಯನ್ನು ಈಶಾನ್ಯ ಮಾನ್ಸೂನ್ವೆಂದು ಕರೆಯಲಾಗುತ್ತದೆ. ಈಶಾನ್ಯ ಮಾರುತ ಅವಧಿಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಪ್ರಧಾನ ಮಳೆಗಾಲವಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತಮಿಳುನಾಡು, ಪಾಂಡಿಚೇರಿಗೆ ಉತ್ತಮ ಮಳೆ ತರಲಿದೆ.
ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.30 ಈಶಾನ್ಯ ಮಾರುತದಿಂದ ಉಂಟಾಗುತ್ತದೆ. ದಣ ಒಳನಾಡಿನಲ್ಲಿ ವಾರ್ಷಿಕ ಮಳೆ 1,019 ಮಿಮೀ ಇದ್ದು, ಇದರಲ್ಲಿ 210 ಮಿಮೀ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಬೀಳುತ್ತದೆ. ಇದರಲ್ಲಿ ಅಕ್ಟೋಬರ್ನಲ್ಲಿ ಅತಿ ಹೆಚ್ಚು ಅಂದರೆ 171 ಮಿಮೀ ಮಳೆ ಸುರಿಯಲಿದೆ.
ಮೇ ತಿಂಗಳಲ್ಲಿ ಸುರಿದ ಮಳೆ ವಿವರ
*ವರ್ಷ ಮಿಮೀಗಳಲ್ಲಿ
2025 307
2024 181
2023 305
2022 270
2021 130
2020 129
2019 155
2018 239
2017 241
2016 140
2015 178
2014 74