ಹಾಸನ: ಹಾಸನಾಂಬ ದೇವಾಲಯಕ್ಕೆ ಗುರುವಾರ ದಾಖಲೆಯ ಪ್ರಮಾಣದಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಬೆಳಗ್ಗೆಯಿಂದಲೇ ಭಕ್ತರ ಸಂಖ್ಯೆ ಹೆಚ್ಚಿದ್ದು, ಸರದಿ ಸಾಲುಗಳು ಭರ್ತಿಯಾಗಿದ್ದವು. ಧರ್ಮದರ್ಶನ, 300 ರೂ. ಹಾಗೂ 1000 ರೂ. ಟಿಕೆಟ್‌ನ ಸರದಿ ಸಾಲುಗಳು ಕೂಡ ಭರ್ತಿಯಾಗಿದ್ದವು. ಭಕ್ತರು ದೇವಿಯ ದರ್ಶನಕ್ಕೆ ಸರಿದಿ ಸಾಲಿನಲ್ಲಿ ಕಾಯುವಂತಾಯಿತು.
ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ಧರ್ಮದರ್ಶನ ಪಡೆಯುವ ಭಕ್ತರು 4 ರಿಂದ 5 ಗಂಟೆ ಸರದಿ ಸಾಲಿನಲ್ಲಿ ನಿಲ್ಲುವಂತಾಯಿತು. 300 ರೂ. ಟಿಕೆಟ್ ಪಡೆದವರು ಕೂಡ ಅರ್ಧ ಗಂಟೆಗೂ ಹೆಚ್ಚು ಸಮಯ ಕಾಯಬೇಕಾಯಿತು. ಆರಂಭದ ದಿನಗಳಲ್ಲಿ 15 ನಿಮಿಷದಲ್ಲಿ ದರ್ಶನವಾಗುತ್ತಿತ್ತು.
ಮಧ್ಯಾಹ್ನ 2 ಗಂಟೆಯಿಂದ 3.30ರವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಬುಧವಾರ ಸುಮಾರು 2.46 ಲಕ್ಷ ಜನ ಹಾಸನಾಂಬ ದರ್ಶನ ಪಡೆದಿದ್ದಾರೆ. ಇಲ್ಲಿಯವರೆಗೆ ಒಟ್ಟು 11.30 ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ವಿಡಿಯೋ ರೆಕಾರ್ಡ್ ಮೂಲಕ ಮಾಹಿತಿ ನೀಡಿದರು.
ಗುರುವಾರ ಬೆಳಗ್ಗೆಯಿಂದಲೇ ಭಾರಿ ಜನಸಂದಣಿ ಉಂಟಾಗಿದೆ. ಜನರ ಸಾಲು ಧರ್ಮ ದರ್ಶನ ಮತ್ತು 300 ರೂ. ಟಿಕೆಟ್‌ನ ಮಾರ್ಗಗಳು ಬ್ಯಾರಿಕೇಡ್ ಪ್ರದೇಶವನ್ನು ದಾಟಿ ರಸ್ತೆವರೆಗೆ ವಿಸ್ತರಿಸಿವೆ. ದರ್ಶನಕ್ಕೆ ಸುಮಾರು 4 ಗಂಟೆಗಳಿಗೂ ಅಧಿಕ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನಸಂದಣಿ ಹೆಚ್ಚಾಗಿದೆ. ಕಳೆದ ವರ್ಷ ದರ್ಶನಕ್ಕೆ 10-15 ಗಂಟೆಗಳು ಬೇಕಾಗುತ್ತಿತ್ತು. ಈ ಬಾರಿ ಆ ಸಮಯವನ್ನು 4-5 ಗಂಟೆಗಳಿಗೆ ಇಳಿಸಿದ್ದೇವೆ. ಆದರೂ, ದುಪ್ಪಟ್ಟು ಜನಸಂದಣಿ ಇದೆ. ಒಂದು ದಿನದಲ್ಲಿ 3 ಲಕ್ಷ ಜನರಿಗೆ ದರ್ಶನ ನೀಡುವುದು ಸವಾಲಿನ ಕೆಲಸ. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದರು.
ಗಣ್ಯರಿಂದ ದರ್ಶನ: ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಕುಟುಂಬ ಸದಸ್ಯರ ಜತೆ ಶಿಷ್ಟಾಚಾರದ ವಾಹನದಲ್ಲಿ ಬಂದು ದೇವಿ ದರ್ಶನ ಪಡೆದರು. ಎಂಎಲ್‌ಸಿ ಗೋವಿಂದರಾಜ್, ಪುಷ್ಪಾಅಮರ್‌ನಾಥ್, ನೊಣವಿನಕೆರೆ ಅಜ್ಜಯ್ಯ, ವಿವಿಧ ಮಠಗಳ ಮಠಾಧೀಶರು, ನ್ಯಾಯಾಧೀಶರು ಹಾಗೂ ಬಿಗ್‌ಬಾಸ್ ಖ್ಯಾತಿಯ ನೀತು ಬೆಳಗ್ಗೆಯೇ ದೇವಾಲಯಕ್ಕೆ ಆಗಮಿಸಿ ಹಾಸನಾಂಬೆ ಹಾಗೂ ಸಿದ್ದೇಶ್ವರ ದೇವರ ದರ್ಶನ ಪಡೆದರು.
ಮೈಕ್ ಹಿಡಿದು ಅನೌನ್ಸ್ ಮಾಡಿದ ಡಿಸಿ: ಹಾಸನಾಂಬ ದೇವಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಡಿಸಿ ಲತಾಕುಮಾರಿ ಖುದ್ದು ದೇವಾಲಯದ ಎದುರು ನಿಂತು ಭಕ್ತರು ಬೇಗ ದರ್ಶನ ಮಾಡಿಕೊಂಡು ಹೋಗುವಂತೆ ಮೈಕ್‌ನಲ್ಲಿ ಮನವಿ ಮಾಡಿದರು.
ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಿದ್ದೇಶ್ವರಸ್ವಾಮಿ ದೇಗುಲದ ಬಾಗಿಲನ್ನು ಅಧಿಕಾರಿಗಳು ಬಂದ್ ಮಾಡಿದ್ದರು. ಸಿದ್ದೇಶ್ವರಸ್ವಾಮಿ ದೇವಾಲಯದ ಎದುರು ದರ್ಶನಕ್ಕೆ ನಿಂತ ಭಕ್ತರು ಡಿಸಿಗೆ ಮನವಿ ಮಾಡಿದ್ದರಿಂದ ಕೂಡಲೇ ಸಿದ್ದೇಶ್ವರಸ್ವಾಮಿ ದೇವಾಲಯದ ಬಾಗಿಲು ತೆಗೆಸಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.