ಜಿಲ್ಲೆ

ಜಿಲ್ಲೆಯಲ್ಲಿ ದಾಖಲೆ ಹಾಲು ಶೇಖರಣೆ

ವಿನಯ ಹೆಗಡೆ

ಸಿದ್ದಾಪುರ: ಹೈನೋದ್ಯಮವೇ ಸಾಕಪ್ಪ ಸಾಕು ಎನ್ನುವಂತಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಒಂದೇ ದಿನದಲ್ಲಿ 50,227ಕೆ.ಜಿ. ಹಾಲು ಶೇಖರಣೆಯಾಗಿದ್ದು ಇದೊಂದು ದಾಖಲೆಯಾಗಿದೆ.

ಕಳೆದ ಹಲವು ವರ್ಷಗಳಿಂದ ಹಾಲಿನ ಶೇಖರಣೆ ಹೆಚ್ಚಿಗೆ ಮಾಡಬೇಕೆಂದು ಜಿಲ್ಲೆಯ ಹೈನುಗಾರರು ಮುಂದಡಿ ಇಟ್ಟಾಗ ಹಲವು ತೊಂದರೆಗಳು ಬರುತ್ತಿದ್ದವು. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಹೈನೋದ್ಯಮುಕ್ಕೆ ಬಹಳ ಹೊಡೆತಬಿದ್ದ ಪರಿಣಾಮ ಹಾಲು ಸಂಘಗಳು, ಒಕ್ಕೂಟಗಳು ಹಾಲನ್ನು ಹೆಚ್ಚಿಸುವ ವಿವಿಧ ಬಗೆಯ ಪ್ರಯತ್ನಮಾಡಿದ್ದವು.

ಮಳೆ ಅಭಾವದಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಒಂದೆಡೆಯಾದರೆ ಇನ್ನೊಂದೆಡೆ ಆಕಳುಗಳಿಗೆ ಮಾರಕ ಚರ್ಮಗಂಟು ರೋಗ ಕಾಣಿಸಿಕೊಂಡ ಪರಿಣಾಮ ಭಾರೀ ಪ್ರಮಾಣದಲ್ಲಿ ಹಾಲಿನ ಶೇಖರಣೆ ಕುಂಠಿತಗೊಂಡಿತ್ತು. ಈಗಲೂ ಚರ್ಮ ಗಂಟುರೋಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಮುಂಜಾಗೃತೆಯಾಗಿ ಹೈನುಗಾರರು ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಕಳೆದ ಏಪ್ರಿಲ್, ಮೇ, ಜೂನ್, ಜುಲೈ ತಿಂಗಳುಗಳಲ್ಲಿ ಸರಾಸರಿ ನಿತ್ಯ 35ಸಾವಿರದಿಂದ 38ಸಾವಿರದವರೆಗೆ ಹಾಲು ಶೇಖರಣೆ ಆಗುತ್ತಿತ್ತು. ನಂತರ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ನಿಧಾನವಾಗಿ ಹಾಲಿನ ಶೇಖರಣೆ ಹೆಚ್ಚಾಗುತ್ತ ಈಗ ದಾಖಲೆಯ ಪ್ರಮಾಣದಲ್ಲಿ ಹಾಲಿನ ಶೇಖರಣೆ ಆಗುತ್ತಿದೆ.

ಈ ವರ್ಷದ ಉತ್ತಮ ಮಳೆಯಿಂದ ಹಸಿಮೇವಿನ ಕೊರತೆ ಆಗದಿರುವುದು ಹಾಗೂ ಗ್ರಾಮಕ್ಕೊಂದು ಹಾಲು ಸಂಘ ಸ್ಥಾಪನೆ ಅಲ್ಲದೇ ಸಂಘದ ವ್ಯಾಪ್ತಿಯಲ್ಲಿ ಉಪಕೇಂದ್ರವನ್ನು ತೆರೆದು ಹಾಲು ಶೇಖರಣೆ ಮಾಡುತ್ತಿರುವುದರಿಂದ, ಒಕ್ಕೂಟದಿಂದ ಸಂಘಗಳಿಗೆ ಸಮಯಕ್ಕೆ ಸರಿಯಾಗಿ ಪಶು ಆಹಾರ, ಲವಣ ಮಿಶ್ರಣ, ರಸಮೇವು ಪೂರೈಕೆ ಆಗುತ್ತಿರುವುದಲ್ಲದೇ ಪಶುವೈದ್ಯಕೀಯ ಸೇವೆ, ಒಕ್ಕೂಟದ ಅಧ್ಯಕ್ಷರ, ಆಡಳಿತ ಮಂಡಳಿಯ ನಿರ್ದೇಶಕರುಗಳ ಸಲಹೆ, ಅಧಿಕಾರಿಗಳ ಮಾರ್ಗದರ್ಶನ ಹಾಲಿನ ಶೇಖರಣೆ ಹೆಚ್ಚಾಗುವುದಕ್ಕೆ ಪೂರಕ ಕಾರಣ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಈಗ 293 ಹಾಲು ಸಂಘಗಳ:ಉ ಕಾರ್ಯನಿರ್ವಹಿಸುತ್ತಿದ್ದು ಮತ್ತಷ್ಟು ಸಂಘಗಗಳನ್ನು ಹೆಚ್ಚಿಸುವುದಕ್ಕೆ ಧಾರವಾಡ ಹಾಲು ಒಕ್ಕೂಟ ಮುಂದಾಗಿದೆ.

ಹಳಿಯಾಳ,ಮುಂಡಗೋಡ, ದಾಸನಕೊಪ್ಪ, ಬನವಾಸಿ ಭಾಗದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗುತ್ತಿರುವುದು ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಹೊಸ ಮೈಲುಗಲ್ಲು ದಾಟಲು ಮುಖ್ಯಕಾರಣವಾಗಿದೆ.

ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಿನ ಶೇಖರಣೆ ಇದೇ ಮೊದಲಬಾರಿಗೆ 50227ಕೆ.ಜಿ.ಶೇಖರಣೆ ಆಗಿರುವುದು ಸಂತಸ ತಂದಿದೆ. ಇದರಲ್ಲಿ ಹಾಲು ಉತ್ಪಾದಕರ, ಸಂಘಗಳ, ಸಿಬ್ಬಂದಿಗಳ ಶ್ರಮ ಇದೆ. ಮುಂದಿನ ದಿನದಲ್ಲಿ 75ಸಾವಿರ ಕೆ.ಜಿ.ಹಾಲು ಸಂಗ್ರಹಿಸುವ ಗುರಿ ಇದೆ. ಈ ಕುರಿತು ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. | ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ. ಉಪಾಧ್ಯಕ್ಷರು. ಧಾರವಾಡ ಹಾಲು ಒಕ್ಕೂಟ