ಜಿಲ್ಲೆ

ಪ್ರಾಣಿ ಜಗತ್ತಿನೊಂದಿಗಿನ ಮನುಷ್ಯ ಸಂಬಂಧ ದಾಖಲಾಗಲಿ: ಪ್ರೊ. ಎಸ್.ಜಿ. ಸಿದ್ಧರಾಮಯ್ಯ

ಬೆಂಗಳೂರು ಮನುಷ್ಯರಿಗಿಂತ ಪ್ರಾಣಿಗಳು ಹೆಚ್ಚು ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿದ್ದು, ಪ್ರಾಣಿ ಜಗತ್ತಿನೊಂದಿಗಿನ ಮನುಷ್ಯ ಸಂಬಂಧವನ್ನು ದಾಖಲಿಸುವ ಕೆಲಸವಾಗಬೇಕು ಎಂದು ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕಬ್ಬನ್‌ಪಾರ್ಕ್‌ನಲ್ಲಿರುವ ಸೆಂಚುರಿ ಕ್ಲಬ್‌ನಲ್ಲಿ ಶನಿವಾರ ಮೈಸೂರಿನ ಅಪರಾಜಿತೆ ಪ್ರಕಾಶನ ಹೊರತಂದ ವೇದವತಿ ಕೋದಂಡರಾಮ್ ಅವರ ‘ಯಾವ ಜನ್ಮದ ಮೈತ್ರಿ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಿನ ಅವಿನಾಭಾವ ಸಂಬಂಧವನ್ನು ಕಟ್ಟಿಕೊಟ್ಟಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರು ಕೆಲವು ಕೃತಿಗಳಲ್ಲಿ ಪ್ರಾಣಿ ಜತೆಗಿನ ಸಂಬಂಧವನ್ನು ಉಲ್ಲೇಖಿಸಿದ್ದಾರೆ. ವೇದವತಿ ಅವರು ನಾಯಿಗಳ ಜತೆಗೆ ತಾವು ಹಾಗೂ ಕುಟುಂಬದ ಸದಸ್ಯರು ಹೊಂದಿದ್ದ ಸಂಬಂಧಗಳನ್ನು ಪ್ರಸಂಗಗಳ ಮೂಲಕ ಈ ಕೃತಿಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪ್ರಾಣಿ ಜಗತ್ತು ಜತೆಗಿನ ಮನುಷ್ಯ ಸಂಬಂಧವನ್ನು ಇಂಗ್ಲಿಷ್‌ನಲ್ಲಿ ದಾಖಲಿಸಲಾಗಿದೆ. ಕನ್ನಡದಲ್ಲಿಯೂ ಈ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ರಾತ್ರಿ 12 ಗಂಟೆ ಬಳಿಕ ಯಾವುದಾದರೂ ಒಂದು ನಾಯಿ ಬೊಗಳಿದರೆ ಸುತ್ತಮುತ್ತಲಿನ ಹತ್ತಾರು ನಾಯಿಗಳು ಬೊಗಳುತ್ತವೆ. ಅವುಗಳು ಬೊಗಳುವುದು ಶೆಹನಾಯಿ ವಾದ್ಯದ ಸದ್ದಿನಂತೆ ಕೇಳಿಸುತ್ತದೆ. ಆದ್ದರಿಂದ ಪ್ರಾಣಿ ಜಗತ್ತಿನ ನಿಗೂಢ ರಹಸ್ಯದ ಬಗ್ಗೆ ದಾಖಲಿಸಬೇಕು ಎಂದರು.

ಪಶುವೈದ್ಯಕೀಯ ಕಾಲೇಜಿನ ಡೀನ್ ಪ್ರೊ.ಎಂ. ನಾರಾಯಣಸ್ವಾಮಿ, ಈ ಕೃತಿಯು ವಿಶ್ವವಿದ್ಯಾಲಯದ ಪಠ್ಯವಾಗಲು ಯೋಗ್ಯವಿದೆ. ಸುಂದರ ಕಥಾ ಹಂದರ ಇರುವುದರಿಂದ ಸಿನಿಮಾ ಮಾಡಬಹುದಾಗಿದೆ. ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಈ ಪುಸ್ತಕವನ್ನು ಕಳಿಸಿಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.