ಉಪ್ಪಿನಂಗಡಿ: ದ್ವಿಚಕ್ರ ವಾಹನ ಮತ್ತು ಸಣ್ಣ ವಾಹನಗಳ ಮೇಲೆ ಪದೇಪದೆ ದಂಡ ವಿಧಿಸುವ ಅಧಿಕಾರಿಗಳು ಖಾಸಗಿ ಬಸ್‌ಗಳು ದಾಖಲೆ ಇಲ್ಲದೆ ಸಂಚರಿಸುತ್ತಿದ್ದರೂ ಮೌನವಾಗಿರುವುದೇಕೆ ಎಂಬ ಪ್ರಶ್ನೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾದ ಬೆನ್ನಿಗೆ ಸಾರಿಗೆ ಇಲಾಖಾಧಿಕಾರಿಗಳಿಂದ ಬಸ್ ದಾಖಲೆಗಳ ಪರಿಶೀಲನಾ ಕಾರ್ಯ ಬಿರುಸಿನಿಂದ ನಡೆಯತೊಡಗಿದೆ.
ಉಪ್ಪಿನಂಗಡಿಯ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯ ಸುರೇಶ್ ಅತ್ರಮಜಲು ದಾಖಲೆಗಳಿಲ್ಲದೆ ಸಂಚರಿಸುವ ಬಸ್‌ಗಳ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿ ಇಲಾಖಾಧಿಕಾರಿಗಳ ಮೌನದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇದರಿಂದ ಎಚ್ಚೆತ್ತ ಸಾರಿಗೆ ಇಲಾಖಾಧಿಕಾರಿಗಳು ಉಪ್ಪಿನಂಗಡಿಯಿಂದ ಬೆಳ್ತಂಗಡಿ ತಾಲೂಕಿಗೆ ಪ್ರಯಾಣಿಕ ಸೌಲಭ್ಯವನ್ನು ಒದಗಿಸುವ ಖಾಸಗಿ ಬಸ್ಸುಗಳ ದಾಖಲೆ ಪರಿಶೀಲನಾ ಅಭಿಯಾನ ಕೈಗೆತ್ತಿಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ದಾಖಲೆ ಪತ್ರಗಳು ಸಮರ್ಪಕವಾಗಿಲ್ಲದ ಬಸ್ಸುಗಳ ಸಂಚಾರಕ್ಕೆ ತಡೆಯೊಡ್ಡಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಕಳುಹಿಸಲಾಗುತ್ತಿದೆ. ಇನ್ನೊಂದೆಡೆ ಸಾರಿಗೆ ಅಧಿಕಾರಿಗಳ ವಾಹನ ಠಿಕಾಣಿ ಹೂಡಿರುವ ರಸದ್ತೆಯಲ್ಲಿ ಸಂಚರಿದೆ ಕೆಲ ಖಾಸಗಿ ಬಸ್ಸುಗಳ ಚಾಲಕರು ಸಂಚಾರವನ್ನೇ ಸ್ಥಗಿತಗೊಳಿಸುತ್ತಿದ್ದಾರೆಂಬ ಆರೋಪ ಪ್ರಯಾಣಿಕರಿಂದ ಕೇಳಿ ಬಂದಿದೆ. ಖಾಸಗಿ ಬಸ್ಸುಗಳಲ್ಲಿ ಕೆಲವು ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದು, ಅಪಘಾತದಂತಹ ಸನ್ನಿವೇಶದಲ್ಲಿ ಸಂತ್ರಸ್ತರಿಗೆ ವಿಮಾ ಸೌಲಭ್ಯ ದೊರೆಯದಂತಾಗಲು ಕಾರಣವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು.