ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದಾವಣಗೆರೆ ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿರುವುದು ಹುಚ್ಚವ್ವನಹಳ್ಳಿ ಗ್ರಾಮ. ಹೊಸದುರ್ಗ- ದಾವಣಗೆರೆ ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮದಿಂದ 2 ಕಿಮೀ ಅಂತರದಲ್ಲಿ ನೆಲೆ ನಿಂತಿದ್ದಾಳೆ ಶ್ರೀ ಇಟಗಿ ಕರಿಯಮ್ಮ ದೇವಿ.
ಹುಚ್ಚವ್ವನಹಳ್ಳಿಯಿಂದ ಮಾಯಕೊಂಡ ಮಾರ್ಗದಲ್ಲಿ ಈ ದೇಗುಲ ಕಾಣಸಿಗಲಿದೆ. ಮಣ್ಣಿನ ಗುಡ್ಡೆಯಾಕಾರದಲ್ಲಿದ್ದ ಕರಿಯಮ್ಮ ದೇಗುಲ 35 ವರ್ಷಗಳ ಹಿಂದೆ, ಮೂಲ ಸ್ಥಳದಲ್ಲೇ ಮರು ನಿರ್ವಣಗೊಂಡಿದೆ. ಗುಡಿಯು ದೊಡ್ಡದಾಗಿದ್ದು, 6 ಕಲ್ಲುಕಂಬಗಳ ಮೇಲೆ ನಿಂತಿರುವ ದೇಗುಲಕ್ಕೆ ಕಲ್ಲಿನ ಚಪ್ಪಡಿಯ ಮೇಲೊದಿಕೆ ಇದೆ. ಗರ್ಭಗುಡಿ, ನವರಂಗ, ಮಹಾಮಂಟಪ ಹಾಗೂ ವಿಶಾಲವಾದ ಪ್ರಾಂಗಣಗಳನ್ನು ಹೊಂದಿದೆ. ಇತ್ತೀಚೆಗೆ ತಗಡು ಶೀಟುಗಳ ಮೇಲೊದಿಕೆ ಸಹ ಅಳವಡಿಸಲಾಗಿದೆ.
ಹುಚ್ಚವ್ವನಹಳ್ಳಿ ಗ್ರಾಮದೊಳಗೆ ದೇವಿಯ ಉತ್ಸವ ಮೂರ್ತಿ ದೇಗುಲವಿದ್ದು, ಹಬ್ಬ ಹಾಗೂ ವಿವಿಧ ಧಾರ್ವಿುಕ ಕಾರ್ಯಗಳಲ್ಲಿ ಉತ್ಸವ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಿ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.
ಸಂಪ್ರದಾಯದಂತೆ ಪ್ರತಿವರ್ಷ ಯುಗಾದಿ ಹಬ್ಬ ಮುಗಿದು 8 ದಿನಗಳ ನಂತರ ಸಾರು ಹಾಕುವುದರೊಂದಿಗೆ ಕರಿಯಮ್ಮ ದೇವಿ ಜಾತ್ರೆಗೆ ಚಾಲನೆ ಸಿಗಲಿದೆ. ಈ ಬಾರಿ ಏ.12 ರಂದು ಕಂಕಣಧಾರಣೆ, ಏ.13 ರಂದು ಪೂಜಾರ್ ವಂಶಸ್ಥರಿಂದ ಮದಲಿಂಗ ಶಾಸ್ತ್ರ, ಏ.14 ರಂದು ತಳವಾರ ವಂಶಸ್ಥರಿಂದ ದೇವಿಗೆ ಮದಲಿಂಗ ಶಾಸ್ತ್ರ, ಏ.15 ರಂದು ಹುಚ್ಚವ್ವನಹಳ್ಳಿ ಗೌಡ್ರ ವಂಶಸ್ಥರಿಂದ ಮದಲಿಂಗ ಶಾಸ್ತ್ರ, ಏ.16ಕ್ಕೆ ವಿಶೇಷ ಪೂಜೆ ಹಾಗೂ ಸಾರುಬಾನ ಎಡೆ ಕಾರ್ಯಕ್ರಮ ಜರುಗಿದೆ. ಗುರುವಾರ ಬೆಳಗ್ಗೆ ಗ್ರಾಮದೊಳಗಿರುವ ದೇವಾಲಯದ ಆವರಣದಲ್ಲಿ ಉಚ್ಚಾಯ ಉತ್ಸವ ಜರುಗಿತು.
ಸುಮಾರು 20 ವರ್ಷದಿಂದ ಪ್ರತಿ ಅಮಾವಾಸ್ಯೆಗೆ ದೇವಾಲಯದಲ್ಲಿ ಹರಕೆ ಮಾಡಿಕೊಂಡ ಭಕ್ತರಿಂದ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಅನೂಚಾನವಾಗಿ ನಡೆಯುತ್ತಾ ಬಂದಿದೆ. ದೇಗುಲದ ಸಿಡಿಬಂಡಿ, ಬಂದ ಭಕ್ತರಿಗಾಗಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಚೊಕ್ಕದಾಗಿ ಮದುವೆ ಮಾಡಿಕೊಳ್ಳಲು ಸಹ ಸಮುದಾಯ ಭವನ ಸಹ ನಿರ್ವಣವಾಗಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿ ಸದಸ್ಯರಾದ ಆರ್.ಸಿ. ಗಣೇಶ್, ಕೆ.ಜಿ. ಸತೀಶ್, ಎಚ್.ಬಿ. ಸದಾಶಿವ. ಆರ್. ಕುಬೇರಪ್ಪ ಅವರು.
ಐತಿಹ್ಯ: ಹುಚ್ಚವ್ವನಹಳ್ಳಿ ಗ್ರಾಮದ ಹೊರವಲಯದಲ್ಲಿ ಇಟಗಿ ಗ್ರಾಮದಲ್ಲಿ ಸುಮಾರು 600 ವರ್ಷಗಳ ಹಿಂದೆ ಜನರು ವಾಸಿಸುತ್ತಿದ್ದರು. ಅವರ ಗ್ರಾಮ ದೇವತೆಯಾಗಿ ಶ್ರೀ ಕರಿಯಮ್ಮ ದೇವಿ ಅವತರಿಸಿದ್ದಳು. ಕಾಲಕ್ರಮೇಣ ಇಟಗಿ ಗ್ರಾಮ ಕಣ್ಮರೆಯಾಗಿ ದೇವಿಯ ಗುಡಿ ಮಾತ್ರ ಉಳಿದಿದ್ದರಿಂದ ದೇವಿಗೆ ಇಟಗಿ ಕರಿಯಮ್ಮ ಎಂದು ಹೆಸರು ಬಂದಿತೆಂಬ ಐತಿಹ್ಯವಿದೆ. ಪ್ರಸ್ತುತ ಹುಚ್ಚವ್ವನಹಳ್ಳಿ ಮತ್ತು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಅಧಿದೇವತೆಯಾಗಿ ಶೋಭಿಸುತ್ತಿದ್ದಾಳೆ.
ಇಂದು ಸಿಡಿ ಉತ್ಸವ: ಏ.18ರ ಶುಕ್ರವಾರ ಮುಂಜಾನೆ ಕರಿಯಮ್ಮ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಗ್ರಾಮದ ರಾಜಬೀದಿಗಳಲ್ಲಿ ನೆರವೇರಲಿದೆ. ನಂತರ ಸಂಜೆ 5ಕ್ಕೆ ಗ್ರಾಮದ ಹೊರವಲಯದ ಇಟಗಿ ಕರಿಯಮ್ಮ ದೇವಾಲಯ ಮುಂಭಾಗದ ವಿಶಾಲ ಮೈದಾನದಲ್ಲಿ ಸಿಡಿ ಮರಕ್ಕೆ ತೆಂಗಿನಕಾಯಿಗಳನ್ನು ಕಟ್ಟಿ, ಸಾಂಕೇತಿಕವಾಗಿ ಮರವನ್ನು ತಿರುಗಿಸುವ ಮೂಲಕ ಉತ್ಸವ ನಡೆಯಲಿದೆ. ಏ.19ರಂದು ದೇವಾಲಯ ಗಾವು ಹಾಗೂ ಓಕಳಿ ಉತ್ಸವ ಜರುಗಲಿದೆ.
ಸುಕ್ಷೇತ್ರಕ್ಕೆ ಮಾರ್ಗ ದಾವಣಗೆರೆಯಿಂದ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಆನಗೋಡು ಗ್ರಾಮ ತಲುಪಿ, ನಂತರ ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿ ಮೂಲಕ ದೊಡ್ಡ ಮಾಗಡಿಯಿಂದ ಜಿಲ್ಲಾ ರಸ್ತೆ ಮಾಯಕೊಂಡದಿಂದ 5 ಕಿಮೀ ಮತ್ತು ಮಾಯಕೊಂಡ ರೈಲು ನಿಲ್ದಾಣದಿಂದ 1 ಕಿಮೀ ದೂರದಲ್ಲಿದೆ. ರೈಲಿನ ವ್ಯವಸ್ಥೆ ಹಾಗೂ ಹಲವಾರು ಖಾಸಗಿ ಹಾಗೂ ರಾಜ್ಯ ಸಾರಿಗೆ ಬಸ್ಗಳ ವ್ಯವಸ್ಥೆ ಇರುವುದರಿಂದ ಜಾತ್ರೆಗೆ ಬಂದು ಹೋಗಲು ಅನುಕೂಲವಿದೆ.
ಗ್ರಾಮದೇವತೆ ಇಟಗಿ ಕರಿಯಮ್ಮ ದೇವಿಯ ಜಾತ್ರೋತ್ಸವ ಯುಗಾದಿ ನಂತರ 9 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಜತೆಗೆ ದೇವಿ ಹಾಗೂ ಆಂಜನೇಯ ಉತ್ಸವ ಮೂರ್ತಿಗಳನ್ನು ಗ್ರಾಮದೊಳಗೆ ಅದ್ದೂರಿ ಮೆರವಣಿಗೆ ಹಾಗೂ ಸಿಡಿ ಉತ್ಸವ, ಹೂವಿನ ಪಲ್ಲಕ್ಕಿ, ಉಚ್ಚಾಯ ಉತ್ಸವಗಳು ನಡೆಯಲಿವೆ. | ವಿ.ಎಸ್. ಮಧು, ಕಾಂಗ್ರೆಸ್ ಯುವ ಮುಖಂಡ