ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ 
ಜಿಲ್ಲೆ

ಮನಪಾ ಒಳಚರಂಡಿ ಯೋಜನೆ ಕಾರ್ಯಯೋಜನೆ ಸಿದ್ಧಪಡಿಸಲು ಶಿಫಾರಸು

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೀವ್ರವಾಗಿ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆ ಕುರಿತಂತೆ ಸಾರ್ವಜನಿಕ ಉದ್ಯಮಗಳ ಸಮಿತಿಯು ಸಮಗ್ರ ಒಳಚರಂಡಿ ಯೋಜನೆಗೆ ಪೂರಕವಾಗಿ ಕಾಲಮಿತಿಯ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಮಂಡಲಗಳ 20 ಮಂದಿ ಶಾಸಕರನ್ನು ಒಳಗೊಂಡ ಈ ಸಮಿತಿಯು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಧಾರದಲ್ಲಿ ನೀಡಿರುವ ವರದಿಯಲ್ಲಿ ಈ ಶಿಫಾರಸ್ಸು ಮಾಡಿದೆ ಎಂದು ಪಾಲಿಕೆ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡಲು ನಗರಾಭಿವೃದ್ಧಿ ಇಲಾಖೆಯು ಸರ್ಕಾರಕ್ಕೆ ಪತ್ರೆ ಬರೆದಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ ಎಂದು ಐವನ್ ಡಿಸೋಜ ಹೇಳಿದರು.
ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ತ್ವರಿತ ನಗರೀಕರಣ ಹಾಗೂ ಸಮರ್ಪಕ ನೈರ್ಮಲ್ಯ ಮೂಲಸೌಕರ್ಯಗಳ ಅಗತ್ಯತೆ ಪರಿಗಣಿಸಿ ಗುರುತಿಸಲಾದ ಪ್ರದೇಶಗಳಲ್ಲಿ ಭೂಗತ ಒಳರಂಡಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು ಅಗತ್ಯವಾಗಿದೆ. ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಪರಿಸರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಪ್ರಸಕ್ತ ಜಲ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ರಾಜಕಾಲುವೆಗಳ ಮೂಲಕ ನದಿಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಲಮೂಲಗಳು ಕಲುಷಿತವಾಗುತ್ತಿದೆ. ಈ ವಿಸ್ತೃತ ಯೋಜನೆ ತಯಾರಿಸುವಾಗ ಸಂಸ್ಕರಿಸಿದ ನೀರನ್ನು ಮರುಬಳಕೆಗೆ ಬೇಕಾಗಿರುವ ಅಗತ್ಯ ಕಾಮಗಾರಿಗಳನ್ನು ಸೇರಿಸಬೇಕು ಎಂದು ಉಲ್ಲೇಖಿಸಿದೆ.
ಪ್ರಸ್ತಾವಿತ ಸಮಗ್ರ ಯೋಜೆಗೆ ಸುಮಾರು 1250 ಕೋಟಿ ರೂ. ಅಗತ್ಯವಿರುವುದಾಗಿ ಪಾಲಿಕೆ ತಿಳಿಸಿದೆ. ಯೋಜನೆಗೆ ಡಿಪಿಆರ್ ತಯಾರಸಿ ಅಗತ್ಯ ಆಡಳಿತಾತ್ಮಕ ಅನುಮೋದನೆಗಳು, ಅನುದಾನ ಹಂಚಿಕೆ ಹಾಗೂ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಐವನ್ ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆಯ ಬಗ್ಗೆ ಕಳೆದ ಎಂಟು ವರ್ಷಗಳಿಂದ ಶಾಸಕರಾಗಿರುವ ವೇದವ್ಯಾಸ ಕಾಮತ್ ಅವರು ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಈ ಬಗ್ಗೆ ಸಮಗ್ರ ಯೋಜನೆಗೆ ಕ್ರಮ ವಹಿಸಿದ್ದಾರೆಯೇ ಎಂದು ಪ್ರಶ್ನಿಸಿದ ಐವನ್ ಡಿಸೋಜ, ನಗರದ ಒಳಚರಂಡಿಯ ಸಮಗ್ರ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದ ಅಗತ್ಯವಿದೆ. ಹಾಗಾಗಿ ರಾಜಕೀಯ ಬದಿಗಿಟ್ಟು ಸ್ಥಳೀಯ ಶಾಸಕರು, ಸಂಸದರು ಜತೆಯಾಗಿ ಪ್ರಯತ್ನಿಸಬೇಕಿದೆ ಎಂದು ಹೇಳಿದರು.
ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಪ್ರಕಾಶ್ ಸಾಲಿಯಾನ್, ಭಾಸ್ಕರ ರಾವ್, ಮೀನಾ ಟೆಲ್ಲಿಸ್, ನಾಗೇಂದ್ರ ಕುಮಾರ್, ರೆಹಮಾನ್, ನವೀನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.