ಜಯಪ್ರಕಾಶ್ ಹೆಗ್ಡೆ 
ಜಿಲ್ಲೆ

ಗೌಂಡರ್, ವನ್ನಿಯರ್ ಸಮಸ್ಯೆ ನಿವಾರಣೆಗೆ ಸರ್ಕಾರಕ್ಕೆ ಶಿಫಾರಸು

ಎಸ್.ಎನ್.ರವೀಂದ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕೆಲ ಸಮುದಾಯದ ಮುಖಂಡರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಸಭೆ ನಡೆಸಿ ಚರ್ಚಿಸಲಾಗಿದೆ. ಆಯೋಗದಿಂದ ವರದಿ ತಯಾರಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ತಂದೆಯ ಜಾತಿ ಪ್ರಮಾಣ ಪತ್ರ ಆಧಾರದ ಮೇರೆಗೆ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ವಿತರಣೆ ಮಾಡಬೇಕು. ಆಕ್ಷೇಪಣೆ ಬಗೆಹರಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿನ ವನ್ನಿಯರ್, ಗೌಂಡರ್ ಸಮುದಾಯದವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡಲು ಮನವಿ ಮಾಡಿದ್ದರು. ತರೀಕೆರೆ, ಚಿಕ್ಕಮಗಳೂರಿನಲ್ಲಿ ಮುಖಂಡರ ಸಭೆ ನಡೆಸಿ ಚರ್ಚಿಸಲಾಗಿದೆ. ಗೌಂಡರ್ ಸಮುದಾಯವನ್ನು 3ಎಯಿಂದ 2ಗೆ ಸೇರಿಲು ಮನವಿ ಮಾಡಿದ್ದಾರೆ. ಇದು ಅಧಿವೇಶನದಲ್ಲಿ ತೀರ್ಮಾನ ಆಗಬೇಕಿದೆ ಎಂದು ತಿಳಿಸಿದರು.
ಜಾತಿ ಪ್ರಮಾಣ ಪತ್ರದ ಗೊಂದಲಗಳು ಇದ್ದಲ್ಲಿ ಎಸಿ, ಡಿಸಿ ಹಂತದಲ್ಲಿ ಅರ್ಜಿ ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬಹುದು. ಒಂದು ವೇಳೆ ಇತ್ಯರ್ಥವಾಗದಿದ್ದಲ್ಲಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದರೆ ಇತ್ಯರ್ಥಪಡಿಸಲಾಗುವುದು. ಮೊದಲು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದಾಗ ತಂತ್ರಾಂಶದಲ್ಲಿ ಒಂದು ಬಾರಿ ತಪ್ಪಾಗಿ ನಮೂದಾದರೆ ಅದು ಹಾಗೆಯೇ ಮುಂದುವರಿಯುತ್ತದೆ. ಇದರಿಂದಾಗಿ ಶೈಕ್ಷಣಿಕ, ಉದ್ಯೋಗ, ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸಮಸ್ಯೆಯಾಗುತ್ತದೆ. ಹಾಗಾಗಿ ಮೊದಲೇ ಸರಿಯಾಗಿ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಆಯೋಗದ ಸದಸ್ಯರಾದ ರಾಜಶೇಖರ್, ಅರುಣ್‌ಕುಮಾರ್, ಕಲ್ಯಾಣ್‌ಕುಮಾರ್, ಶಾರದಾ ನಾಯಕ್ ಇದ್ದರು.