ದೇವನಹಳ್ಳಿ: ಲಯನ್ಸ್ ಸಂಸ್ಥೆಗೆ 103 ವರ್ಷಗಳ ಇತಿಹಾಸವಿದ್ದು, ಆರೋಗ್ಯ ಶಿಬಿರ ಸೇರಿ ಹಲವು ಸೇವಾ ಕಾರ್ಯಗಳನ್ನು ವಿಶ್ವದಾದ್ಯಂತ ನಡೆಸಿಕೊಂಡು ಬಂದಿದೆ. ಹಸಿದವರ ಹಸಿವು ನೀಗಿಸುವ, ಪ್ರಾಣ ಉಳಿಸಲು ರಕ್ತದಾನದಂತಹ ಸೇವೆಗಳು ಮಹತ್ವ ಎನಿಸಲಿವೆ ಎಂದು ಲಯನ್ಸ್ ಜಿಲ್ಲಾ ಪಾಲಕ ಎಂ.ಬಿ.ದೀಪಕ್ ಸುಮನ್ ಹೇಳಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಲಯನ್ಸ್ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಲಯನ್ಸ್ ಸೇವಾ ಪ್ರತಿಷ್ಠಾನ ಲಯನ್ಸ್ ಸಂಸ್ಥೆ, ಎಎಸ್‌ವಿಎನ್ ಸಂಘ ಮತ್ತು ಎಎಸ್‌ವಿಎನ್ ಮಹಿಳಾ ಸಂಘ, ಅಣ್ಣಮ್ಮ ಸೇವಾ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚುತ್ತಿದೆ. ಸಂದಿಗ್ಧತೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಮಾದರಿ ಕಾರ್ಯ ಎಂದರು.
ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದಿಕ್ ಔಷಧ ಕಿಟ್‌ವಿತರಣೆಯನ್ನು ಪ್ರತಿ ಗ್ರಾಪಂ ಹಂತದಲ್ಲಿ ವಿತರಿಸಿದರೆ ಅನುಕೂಲವಾಗಲಿದೆ ಎಂದರು.
ಪುರಸಭಾ ಅಧ್ಯಕ್ಷೆ ಜಿ.ರೇಖಾ ವೇಣುಗೋಪಾಲ್, ಲಯನ್ಸ್ ಸಂಸ್ಥೆ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಕಾರ್ಯದರ್ಶಿ ಡಿ.ವಿ.ಲಕ್ಷ್ಮೀನಾರಾಯಣ್, ವಾರ್ಷಿಕವಾಗಿ ಸಂಸ್ಥೆ ಹಮ್ಮಿಕೊಳ್ಳುವ ನಡೆಸಿಕೊಂಡು ಬಂದಿರುವ ಕಾರ್ಯಕ್ರಮ ವಿವರಿಸಿದರು.
ಲಯನ್ಸ್ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, 43 ವರ್ಷಗಳಿಂದ ಪ್ರತಿ ತಿಂಗಳೂ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ, ಆರೋಗ್ಯ ಶಿಬಿರ ನಡೆಸಲಾಗುತ್ತಿತ್ತು. ಈ ಬಾರಿ ಕರೊನಾ ಕಾರಣದಿಂದ ಅಡಚಣೆಯಾಯಿತು ಎಂದರು.
ಕರೊನಾ ವಾರಿಯರ್ಸ್‌ಗಳಾದ ಶುಶ್ರೂಷಕಿ ಹೇಮಾ ಮತ್ತು ಶ್ರುತಿ, ಪುರಸಭೆಯ ಪರಿಸರ ಅಭಯಂತೆ ನೇತ್ರಾವತಿ, ಆರೋಗ್ಯ ನಿರೀಕ್ಷಕಿಯರಾದ ಬಿಜಿ ಎಸ್., ಶ್ರೀದೇವಿ, ತೃಪ್ತಿ, ಡಿ.ಗ್ರೂಪ್ ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷೆ ರೇಖಾ ಜಿ.ವೇಣುಗೋಪಾಲ್, ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ್, ಡಿಸಿ ಕಚೇರಿ ವ್ಯವಸ್ಥಾಪಕ ಪಿ.ಗಂಗಾಧರ್ ಹಾಗೂ ಪಿಎಸ್‌ಐ ನಾಗಾರಜ್ ಅವರನ್ನು ಗೌರವಿಸಲಾಯಿತು.
ಶಿಬಿರದಲ್ಲಿ 33 ಯುನಿಟ್ ರಕ್ತ ಸಂಗ್ರಹವಾಯಿತು. ಕ್ಷಯರೋಗಿಗಳಿಗೆ ಔಷಧ ದಿನಸಿ ಕಿಟ್ ವಿತರಣೆ, ಆಯುಷ್ ಇಲಾಖೆಯಿಂದ ಆಯುರ್ವೇದಿಕ್ ರೋಗ ನಿರೋಧಕ ಶಕ್ತಿ ಹೆಚ್ಚಳದ ಕಿಟ್ ವಿತರಣೆ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಬಿ.ವಿ ಲಕ್ಷ್ಮೀನಾರಾಯಣ್, ಖಜಾಂಚಿ ಎಸ್.ಶಂಕರ್, ಎಎಸ್‌ವಿಎನ್ ಸಂಘದ ಅಧ್ಯಕ್ಷ ಎಸ್.ರಮೇಶ, ಮಹಿಳಾ ಸಂಘದ ಅಧ್ಯಕ್ಷೆ ಅನ್ನಪೂರ್ಣಮ್ಮ, ಜೆಸಿಐ ಅಧ್ಯಕ್ಷ ನರಸಿಂಹಮೂರ್ತಿ, ಲಯನ್ಸ್ ಮಾಜಿ ಅಧ್ಯಕ್ಷರಾದ ಗಂಗಾಧರ್, ಶ್ರೀರಾಮಯ್ಯ, ಕೃಪಾಕರ್, ಲೋಕೇಶ್, ಸತೀಶ್, ಭಾಸ್ಕರ್ ಮುಂತಾದವರು ಭಾಗವಹಿದ್ದರು.