ಜಿಲ್ಲೆ

ಪ್ರಾಮಾಣಿಕ ಸೇವೆಯಿಂದ ಜನಮನ್ನಣೆ

ಬಸವರಾಜ ವೀರಪ್ಪ ಗರಗ

ಹಿರೇಕೆರೂರ: ಪ್ರತಿಯೊಬ್ಬ ಸರ್ಕಾರಿ ನೌಕರರು ತಮಗೆ ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು, ಸೇವೆಯುದ್ದಕ್ಕೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಜನರು ಸ್ಮರಿಸುತ್ತಾರೆ ಎಂದು ತಾಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಕೆ.ಎಂ., ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಂಘದ ವಾರ್ಷಿಕ ಸಾಧಾರಣ ಸಭೆ ಮತ್ತು ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೀವು ಮಾಡಿದ ಸರ್ಕಾರಿ ಸೇವೆ ನಿಮಗೆ ಮತ್ತು ಜನತೆಗೆ ತೃಪ್ತಿ ಕೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಸ್.ಪಿ. ಗೌಡರ ಮಾತನಾಡಿ, ಪ್ರತಿಯೊಬ್ಬ ನೌಕರರಿಗೆ ನಿವೃತ್ತಿ, ವರ್ಗಾವಣೆ ಅನಿವಾರ್ಯವಾಗಿದೆ. ಆದರೆ, ಎಲ್ಲೇ ಇದ್ದರೂ ಸಂಘಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಅಕ್ಷರ ದಾಸೋಹ ನಿರ್ದೇಶಕ ಹರೀಶ ಜಾಡರ ಮಾತನಾಡಿ, ಸಂಘಟನೆ ಇದ್ದರೆ ಮಾತ್ರ ಸಂಘ, ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಂಘಟನೆಯಿಂದ ಮಾತ್ರ ಸಾಧ್ಯ. ಇಂತಹ ವೇದಿಕೆಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು.

ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ 33 ಸರ್ಕಾರಿ ನೌಕರರು, ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕುಮಾರ ಪುಟ್ಟಪ್ಪಗೌಡರ, ಎ.ಎಂ. ಘಾಸಿ, ನಾಗರಾಜ ಪುರದ, ಜಗದೀಶ ಜೋಗಿಹಳ್ಳಿ, ಎಸ್.ಎಸ್. ಕೋರಿಗೌಡ್ರ, ಎ.ಆರ್. ದೊಡ್ಡಗೌಡ್ರ, ಸಿ.ಡಿ. ಕರಿಯಣ್ಣನವರ, ಬಿ.ವಿ. ಸೊರಟೂರ, ದೀಪಕ ಕಾಲ್ಪಲ್, ಇತರರಿದ್ದರು.

ಸಂಘದ ಕಾರ್ಯದರ್ಶಿ ಕುಮಾರ ಮಡಿವಾಳರ, ಸುರೇಶ ಮಲ್ಲಾಡದ ಹಾಗೂ ಎನ್.ಎಸ್.ಹೆಗ್ಗೇರಿ ಕಾರ್ಯಕ್ರಮ ನಿರ್ವಹಿಸಿದರು.