ಮುಳಬಾಗಿಲು: ಕೋಚಿಮುಲ್ ವಿಭಜನೆ ಬಳಿಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರತ್ಯೇಕ ಹಾಲು ಒಕ್ಕೂಟಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ, ಕೋಲಾರ ಹಾಲು ಒಕ್ಕೂಟದ ತಾಲೂಕು ಕ್ಷೇತ್ರಗಳನ್ನು ಅವೈಜ್ಞಾನಿಕವಾಗಿ ಮರು ವಿಂಗಡಣೆ ಮಾಡಲಾಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಆರೋಪಿಸಿದರು.
ನಗರದ ಅಮರಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ಒತ್ತಡಕ್ಕೆ ಒಳಗಾಗಿ ಅಧಿಕಾರಿಗಳು, ನಿಯಮ ಗಾಳಿಗೆ ತೂರಿದ್ದಾರೆ. ಸಹಕಾರ ಇಲಾಖೆಯ ಜಂಟಿ ನಿರ್ದೇಶಕರ ಸುತ್ತೋಲೆ ಮತ್ತು ಮಾರ್ಗದರ್ಶನದ ಬೈಲಾ ಬದಿಗೆ ಸರಿಸಿ ಕೋಲಾರ ಹಾಲು ಒಕ್ಕೂಟದ ಎಂ. ಡಿ. ಗೋಪಾಲ ಮೂರ್ತಿ ಮುಳಬಾಗಿಲು ಸೇರಿ ಎಲ್ಲ ಕ್ಷೇತ್ರಗಳಲ್ಲಿ ನೂತನವಾಗಿ ವಿಂಗಡಣೆ ಮಾಡಿರುವುದು ಶಾಸಕ ಕೆ.ವೈ. ನಂಜೇಗೌಡ ಮತ್ತು ಮತ್ತೋರ್ವ ಕಾಂಗ್ರೆಸ್ ಶಾಸಕರಿಗೆ ಅನುಕೂಲವಾಗುವಂತಿದೆ ಎಂದು ದೂರಿದರು.
ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನಲ್ಲೂರು ವಿ. ರಘುಪತಿರೆಡ್ಡಿ ಮಾತನಾಡಿ, ಕಾಂಗ್ರೆಸ್ ನೇರವಾಗಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಕುತಂತ್ರ ಮತ್ತು ವಾಮಮಾರ್ಗಗಳಿಂದ ಗೆಲ್ಲಲು ಹೊರಟಿದೆ. ಸಹಕಾರಿ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ, ರೈತರೊಂದಿಗೆ ಹಾಲು ಒಕ್ಕೂಟಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಬಿ.ವಿ.ಚಾಮೇಗೌಡ ಮಾತನಾಡಿ, ಅಧಿಕಾರಿಗಳು ಜನರ ತೆರಿಗೆಯಲ್ಲಿ ಸಂಬಳ ಪಡೆಯುತ್ತಿದ್ದೀರಿ ಎಂಬುದನ್ನು ಮರೆಯಬಾರದು. ಕಾನೂನು ಚೌಕಟ್ಟು ಮೀರಿ ನಡೆದುಕೊಳ್ಳುವುದು ಸರಿಯಲ್ಲ, ಅಧಿಕಾರಿಗಳಿಗೆ ಇದು ಶೋಭೆ ತರುವುದಿಲ್ಲ ಎಂದರು.
ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ಬೈರಕೂರು ಗ್ರಾಪಂ ಅಧ್ಯಕ್ಷ ಕಾಡೇನಹಳ್ಳಿ ಅಶೋಕ್, ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷ ಪಿ.ವಿ. ಶಂಕರ್, ತಾಲೂಕು ಆರಾಧನಾ ಸಮಿತಿ ಮಾಜಿ ಅಧ್ಯಕ್ಷ ಮಲ್ಲನಾಯಕನಹಳ್ಳಿ ಅನಂತಪದ್ಮನಾಭರಾವ್, ಅಮರಜೋತಿ ಕಾರ್ಯದರ್ಶಿ ಯಲವಹಳ್ಳಿ ಆರ್. ಅಶೋಕ್ ಕುಮಾರ್, ಬಟ್ಲ ಭಾವನಹಳ್ಳಿ ಚಲಪತಿ ಇದ್ದರು.