ಜಿಲ್ಲೆ

ಫಾರಿನ್​ ಯುವತಿ ಹೇಳಿದ್ದನ್ನು ನಂಬಿ ಕೆಟ್ಟ ರಿಯಲ್​ ಎಸ್ಟೇಟ್​ ಉದ್ಯಮಿ: ಫೇಸ್​ಬುಕ್​ನಲ್ಲೇ 2.5 ಲಕ್ಷ ರೂ. ದೋಚಿದಳು ಲಂಡನ್​ ಬೆಡಗಿ

ಬೆಂಗಳೂರು: ಜಾಗ ಖರೀದಿ ಮಾಡುತ್ತೇನೆ ಎಂದು ಹೇಳಿ ರಿಯಲ್​ ಎಸ್ಟೇಟ್​ ಉದ್ಯಮಿಯಿಂದ ವಿದೇಶಿ ಮಹಿಳೆ 2.5 ಲಕ್ಷ ಹಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೇಸ್​ಬುಕ್​ ಮುಖಾಂತರವೇ ವ್ಯವಹಾರ ನಡೆದಿದ್ದು ಇದೀಗ ಉದ್ಯಮಿ ತನ್ನ ಹಣವನ್ನು ವಾಪಸು ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ.

ಕಲ್ಯಾಣನಗರದ ನಿವಾಸಿ ಅರುಣ್​ ಕುಮಾರ್​ ಹಲವು ವರ್ಷಗಳಿಂದ ರಿಯಲ್​ ಎಸ್ಟೇಟ್​ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದಾನೆ. ಕಳೆದ ವರ್ಷ ಆತ ಲಂಡನ್​ನ ಇಸಾಬುಲ್ಲಾ ಹೆಸರಿನ ಮಹಿಳೆಯೊಂದಿಗೆ ಫೇಸ್​ಬುಕ್​ನಲ್ಲಿ ಗೆಳೆತನ ಬೆಳೆಸಿದ್ದ. ಇತ್ತೀಚೆಗೆ ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕೋಟಿ ಮೌಲ್ಯದ 25 ಎಕರೆ ಜಾಗವನ್ನು ಖರೀದಿಸುವುದಾಗಿ ತಿಳಿಸಿದ ಆಕೆ ಅದಕ್ಕೆ ಆತನ ಸಹಾಯವನ್ನು ಕೇಳಿದ್ದಾಳೆ. ಅರುಣ್​ ಕುಮಾರ್​ ಸಹಕರಿಸುವುದಾಗಿ ಹೇಳಿದ ನಂತರ ಆತನಿಗೆ ರಿಸರ್ವ್​ ಬ್ಯಾಂಕ್​ನ ಒಂದಿಷ್ಟು ಅರ್ಜಿಗಳನ್ನು ಮೇಲ್​ ಮಾಡಿ ಅದಕ್ಕೆ ಸಹಿ ಹಾಕುವಂತೆ ಕೇಳಿದ್ದಾಳೆ. ಹಾಗೆಯೇ ಆತನ ಬ್ಯಾಂಕ್​ ಡೀಟೆಲ್ಸ್ ನೀಡುವಂತೆ ಕೇಳಿದ್ದಾಳೆ. ಅದಾದ ಮೇಲೆ, ಕಸ್ಟಮ್ಸ್​ ಡ್ಯೂಟಿಗೆಂದು 2.5ಲಕ್ಷ ಹಣವನ್ನು ಕಟ್ಟುವಂತೆ ಹೇಳಿದ್ದಾಳೆ. ಈತ ಹಣವನ್ನು ಪಾವತಿಸಿದ ನಂತರ ಆಕೆ ಈತನ ಜತೆಗೆ ಸಂಪರ್ಕ ಕಡಿತಗೊಳಿಸಿಕೊಂಡಿದ್ದು ಫೇಸ್​ಬುಕ್​ನಿಂದಲೂ ಮಾಯವಾಗಿದ್ದಾಳೆ.

ವಂಚನೆಯಿಂದಾಗಿ ಆಘಾತಗೊಂಡಿರುವ ಅರುಣ್​ ಕುಮಾರ್​ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. (ಏಜೆನ್ಸೀಸ್​)