ಜಿಲ್ಲೆ

ಅರಿಯಲು ರಂಗ ಪ್ರಯೋಗ ವಿಷಯ ಅರಿವು ಸರಳ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಳೆಗನ್ನಡ ಕಬ್ಬಿಣದ ಕಡಲೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಶಿಕ್ಷಕರು ಮಾಡುವ ಪಾಠವನ್ನು ಸಂದರ್ಭ ಸಹಿತವಾಗಿ ಸರಿಯಾಗಿ ಓದಿಕೊಂಡು ಮಕ್ಕಳ ಮುಂದೆ ಹಳೆಗನ್ನಡ ಪದ್ಯಗಳನ್ನೂ ಅಭಿನಯಪೂರ್ಣವಾಗಿ ಸ್ವಾರಸ್ಯಮಯವಾಗಿ ಕಲಿಸಿದರೆ ಮಕ್ಕಳಿಗೆ ಹಳೆಗನ್ನಡವು ಕಠಿಣವಾಗುವುದಿಲ್ಲ. ಅವರಲ್ಲೂ ಹಳೆಗನ್ನಡ ಬಗ್ಗೆ ಪ್ರೀತಿ ಹುಟ್ಟಲಿದೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ ಬುಧವಾರ ಆಯೋಜಿಸಿದ್ದ ಪಠ್ಯಾಧಾರಿತ ಕಲಿಕಾ ಪ್ರಯೋಗದ ಕಾರ್ಯಕ್ರಮ ಉದ್ಘಾಟಿಸಿ ವರು ಮಾತನಾಡಿದರು.
ಸಾಹಿತ್ಯ ಮಂಟಪದ ಸಂಚಾಲಕ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಪಠ್ಯಾಧಾರಿತ ರಂಗ ಪ್ರಯೋಗಗಳಿಂದ ಯುವ ರಂಗ ಕಲಾವಿದರಿಗೂ ಪ್ರೋತ್ಸಾಹ ದೊರೆಯಲಿದೆ. ಮಕ್ಕಳಿಗೆ ಕನ್ನಡ ಪಠ್ಯ ಸುಲಭವಾಗಿ ಅರ್ಥವಾಗುತ್ತದೆ. ಬಹಳ ಮುಖ್ಯವಾಗಿ ಇದರಿಂದ ಕನ್ನಡ ಭಾಷೆ ಉಳಿದು, ಬೆಳೆಯಲು ಸಹಾಯವಾಗುತ್ತದೆ ಎಂದರು.
ಎಂ. ಎಂ. ಚಿಕ್ಕಮಠ ಮಾತನಾಡಿ, ಇಂತಹ ರಂಗ ಪ್ರಯೋಗಗಳು ಪ್ರತಿ ಶಾಲೆಯಲ್ಲೂ ಜರುಗಬೇಕು. ಇವು ಮಕ್ಕಳಿಗೆ ಮನರಂಜನೆ ಕೊಡುವುದಲ್ಲದೆ, ಕನ್ನಡ ಭಾಷೆಯ ಕಲಿಕೆಯನ್ನು ಸಂತೋಷಮಯವಾಗಿಸುತ್ತವೆ ಎಂದರು.
ಧನವಂತ ಹಾಜವಗೋಳ, ಕೆ.ಎಚ್. ನಾಯಕ, ಸಂಗಮೇಶ ಹಡಪದ ಮಾತನಾಡಿದರು. ಯುವ ಕಲಾವಿದರಾದ ವೀರೇಶ ಹಾಗೂ ಗಣೇಶ, 10ನೇ ತರಗತಿ ಕನ್ನಡ ವಿಷಯದಲ್ಲಿನ ಬೇಂದ್ರೆಯವರ ಹಕ್ಕಿಹಾರುತಿದೆ ನೋಡಿದಿರಾ, ಪಂಚತಂತ್ರದ ಕಥೆಯಾದ ದುಷ್ಟಬುದ್ಧಿ ಮತ್ತು ಧರ್ಮ ಬುದ್ಧಿ, ಕುಮಾರವ್ಯಾಸನ ಕೌರವೇಂದ್ರನ ಕೊಂದೆ ನೀನು, ರನ್ನನ ಛಲವ ಮೆರೆವೆನ್ ನಾನು ಹಾಗೂ ಡಾ. ಜಿ ಎಸ್ ಶಿವರುದ್ರಪ್ಪ ಸಂಕಲ್ಪ ಗೀತೆಗಳನ್ನು ಸಂಯೋಜಿಸಿ ರಚಿಸಿದ ‘ಕಾಲಾಯ ತಸ್ಮಯಃ’ ಎಂಬ ರಂಗ ಪ್ರಯೋಗ ಪ್ರದರ್ಶಿಸಿದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ಬಿ. ಮಾರುತಿ, ಇತರರು ಇದ್ದರು.