ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಸಮಿತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಮತ್ತು ಗ್ರಂಥಾಲಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಚಾಲನೆ ನೀಡಿದರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಹನುಮಂತಪ್ಪ ಹಳ್ಳಿಕೇರಿ, ಟಿಎಪಿಸಿಎಂಎಸ್ ನಿರ್ದೇಶಕ ಜೋಗ ಹನುಮಮತಪ್ಪ ನಾಯಕ ಇತರರಿದ್ದರು. 
ಜಿಲ್ಲೆ

ವಾಸ್ತವ ತಿಳಿಸುವ ಜವಾಬ್ದಾರಿ ಪತ್ರಕರ್ತರದ್ದು

Kopala - Desk - Eraveni

ಗಂಗಾವತಿ: ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುತ್ತಿದ್ದು, ನಿವೇಶನ ಹಂಚಿಕೆಯಲ್ಲಿ ಶೇ.5ರಷ್ಟು ಮೀಸಲು ಪ್ರಸ್ತಾವನೆಯಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಸಮಿತಿಯಿಂದ ಭಾನುವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಮತ್ತು ಗ್ರಂಥಾಲಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನರಿಗೆ ವಾಸ್ತವಿಕತೆ ತಿಳಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದ್ದು, ಅವರ ಕ್ಷೇಮದ ಬಗ್ಗೆ ಗಮನಹರಿಸಬೇಕಿದೆ. ರಾಜಕೀಯ ಮರುಜನ್ಮದಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದ್ದು, ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲೂ ಸಹಕರಿಸುವಂತೆ ಮನವಿ ಮಾಡಿದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸತ್ಯಕ್ಕೆ ಹತ್ತಿರವಾಗುವಂತ ಸುದ್ದಿಗಳಿಗೆ ಆದ್ಯತೆ ನೀಡಬೇಕಿದ್ದು, ಬ್ರೇಕಿಂಗ್ ನೀಡುವ ಅವಸರದಲ್ಲಿ ತೇಜೋವಧೆ ಸಲ್ಲ. ಪತ್ರಕರ್ತರಲ್ಲಿ ಹಮ್ಮು, ಬಿಮ್ಮುಗಳು ಹೆಚ್ಚುತ್ತಿದ್ದು, ಮುಂದುವರಿದರೆ ಆಪತ್ತು ಕಾಲದಲ್ಲಿ ಯಾರೂ ಬರಲ್ಲ. ಅದಕ್ಕಾಗಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದು ಸೂಕ್ತ. ಪತ್ರಕರ್ತರ ಗ್ರಂಥಾಲಯ ರಾಜ್ಯದಲ್ಲಿ ಮೊದಲಾಗಿದ್ದು, ಇತರೆ ಜಿಲ್ಲೆಗಳಿಗೆ ಮಾದರಿ ಎಂದರು.

ಟಿಎಪಿಎಂಸಿಎಂಎಸ್ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹಳ್ಳಿಕೇರಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೇಮಗುಡ್ಡ, ತಾಲೂಕಾಧ್ಯಕ್ಷ ನಾಗರಾಜ್ ಇಂಗಳಗಿ, ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ದೇವರಾಜ್ ಇದ್ದರು.

ಕಟ್ಟಡ ಲೋಕಾರ್ಪಣೆ

ಇದಕ್ಕೂ ಮೊದಲು ತಾಪಂ ಆವರಣದಲ್ಲಿ ನಿರ್ಮಿಸಿರುವ ಪತ್ರಕರ್ತರ ಗ್ರಂಥಾಲಯದ ಕಟ್ಟಡ ಪೂಜೆ ನೆರವೇರಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕರಾದ ಪರಣ್ಣಮುನವಳ್ಳಿ, ಜಿ.ವೀರಪ್ಪ ಇತರರಿದ್ದರು. ಹಿರಿಯ ಪತ್ರಕರ್ತ ವಿ.ಎಸ್.ಪಾಟೀಲ್‌ರನ್ನು ಸನ್ಮಾನಿಸಲಾಯಿತು.