ಮುಳಬಾಗಿಲು: ಎಸ್ಸಿ, ಎಸ್ಟಿ ಸೇರಿ ದಲಿತರ ಸಮಸ್ಯೆಗಳಿಗೆ ಸ್ಪಂದನೆ ನೀಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿರುತ್ತದೆ. ತಾವು ಸಹ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಬಿ.ನಿಖಿಲ್ ತಿಳಿಸಿದರು.
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆಯ ವೃತ ನಿರೀಕ್ಷಕರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿ, ಈ ದಿನ ಸಭೆಯಲ್ಲಿ ದಲಿತ ಮುಖಂಡರು ತಿಳಿಸಿರುವ ಸಮಸ್ಯೆಗಳಲ್ಲಿ ಮುಂದಿನ ಸಭೆ ಒಳಗೆ ಶೇ.100ಕ್ಕೆ 60 ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಸ್ಪೃಶ್ಯತೆ ಆಚರಣೆ, ದಲಿತ ಸಮುದಾಯವನ್ನು ತಾರತಮ್ಯದಿಂದ ನೋಡುವುದು ಎಲ್ಲಿಯೂ ಕಂಡುಬಂದಿಲ್ಲ, ಅಂತ ಘಟನೆಗಳು ಎಲ್ಲಿಯಾದರೂ ನಡೆಯುತ್ತಿದ್ದರೆ ಪೊಲೀಸ್ ಇಲಾಖೆಗೆ ತಿಳಿಸಬೇಕು. ಇಂದಿನ ಸಭೆಯಲ್ಲಿ ತಿಳಿಸಿರುವ ಎಲ್ಲ ಸಮಸ್ಯೆಗಳ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದರು.
ನಗರದ ಬಜಾರು ಬೀದಿ ರಸ್ತೆಗೆ ಡಾ.ಬಿ.ಆರ್ ಅಂಬೇಡ್ಕರ್ ಬಜಾರು ಬೀದಿ ಎಂದು ನಾಮಫಲಕ ಅಳವಡಿಸಲಾಗಿದೆ. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ, ಅಂಬೇಡ್ಕರ್ ಭವನ ನಿಮಾರ್ಣಕ್ಕೆ ಸರ್ಕಾರದಿಂದ 1 ಕೋಟಿ ರೂ. ಮಂಜೂರಾಗಿದ್ದು, ಶಾಸಕರು ಸಹ 25 ಲಕ್ಷ ರೂ.ನೀಡುವುದಾಗಿ ತಿಳಿಸಿದ್ದಾರೆ. ಆದರೆ ಭವನಕ್ಕೆ ಸೇರಿದ 20 ಗುಂಟೆ ಜಮೀನಿನ ತಕರಾರಿನಿಂದ ನಿಮಾರ್ಣಕ್ಕೆ ತೊಂದರೆಯಾಗಿದೆ ಹಾಗಾಗಿ ಈ ಕೂಡಲೇ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು. ತಾಲೂಕಿನಲ್ಲಿ ಎಗ್ಗಿಲ್ಲದೆ ಮದ್ಯೆ ಮಾರಾಟವಾಗುತ್ತಿದ್ದರು ಅಬಕಾರಿ ಇಲಾಖೆ ರ್ನಿಲಕ್ಷ ತೋರಿದೆ, ಅದರಲ್ಲೂ ಯಥೇಚ್ಛವಾಗಿ ದಲಿತ ಕೇರಿಗಳಲ್ಲಿ ಸಾರಾಯಿ ಮಾರಾಟ ಮಾಡುವ ಚಿಲ್ಲರೆ ಅಂಗಡಿಗಳ ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದಲಿತ ಮುಖಂಡರು ದೂರಿದರು.
ನಗರ ಠಾಣೆ ಇನ್ಸ್ಪೆಕ್ಟರ್ ಎನ್.ರಾಜಣ್ಣ, ವಿಠ್ಠಲ್ ವೈ.ತಳವಾರ್, ಎಲ್.ಮಮತಾ, ಆರ್.ಕೊಂಡಪ್ಪ, ಎಲ್. ವರದರಾಜು, ಭುವನ್ ಕುಮಾರ್, ಪಿ.ವೆಂಕಟೇಶ್, ಮೆಕಾನಿಕ್ ಜಿ. ಶ್ರೀನಿವಾಸ್, ಎನ್.ವಿಜಯ್ ಕುಮಾರ್, ವಿ.ಕೆ ರಾಜು, ತಾತಿಘಟ್ಟ ರಾಮಚಂದ್ರಪ್ಪ, ಗುಜನಹಳ್ಳಿ ಸಿ.ರಾಮಪ್ಪ ಇದ್ದರು.