ನರೇಗಲ್ಲ: ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ನೈತಿಕ, ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಸಂಸ್ಕಾರಯುತ ಜೀವನದತ್ತ ಕೊಂಡೊಯ್ಯುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಸಮಿಪದ ಕೋಟುಮಚಗಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ 1985-86ನೇ ಸಾಲಿನ ವಿದ್ಯಾರ್ಥಿಗಳಿಂದ ಜರುಗಿದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಶಿಕ್ಷಕರ ಕೈಯಲ್ಲಿ ಶಾಲೆ ಕಲಿತು ಬದುಕು ರೂಪಿಸಿಕೊಂಡವರೆಲ್ಲರೂ ಇಂತಹ ಸಮಾರಂಭಗಳನ್ನು ಏರ್ಪಡಿಸಿ ಗುರುವಿನ ಋಣವನ್ನು ಕಿಂಚಿತ್ತಾದರೂ ತೀರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ವಿ.ಜಿ. ಕುಲಕರ್ಣಿ, ಕಲಿತ ವಿದ್ಯಾ ಮಂದಿರ, ಗುರುಗಳನ್ನು ಮರೆಯದೆ ಹಳೇ ವಿದ್ಯಾರ್ಥಿಗಳು ಇಂತಹ ಅಭೂತಪೂರ್ವ ಕಾರ್ಯಕ್ರಮ ನೆರವೇರಿಸಿದ್ದು ಶ್ಲಾಘನೀಯವಾಗಿದೆ ಎಂದರು.
ಹಳೆಯ ವಿದ್ಯಾರ್ಥಿ ಡಾ. ವಿ.ಯು. ನಾಗಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರಯ್ಯ ಹಿರೇಮಠ, ಫಕೀರಯ್ಯ ಹಿರೇಮಠ, ಸರಸ್ವತಿಬಾಯಿ ದೊಡ್ಡಮನಿ, ನಿವೃತ್ತ ಶಿಕ್ಷಕಿ ಎ.ಐ ರಾಂಪೂರ, ಶ್ರೀಧರ ಕುಲಕರ್ಣಿ, ಸುರೇಶ ಪತ್ತಾರ, ಪ್ರಕಾಶ ಕುಲಕರ್ಣಿ, ಜಿ.ಬಿ. ಪಾಟೀಲ ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು. ಸಮಾರಂಭಕ್ಕೂ ಮೊದಲು ನಿವೃತ್ತ ಶಿಕ್ಷಕರಿಗೆ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮೂಲಕ ಬರಮಾಡಿಕೊಂಡು ಪಾದಪೂಜೆ ನೆರವೇರಿಸಲಾಯಿತು. ಆರ್. ಎನ್. ಶಿಂಗಟಾಲಕೇರಿ, ಸಿ.ಎಂ. ಕೊಂಗವಾಡ ಹಾಗೂ ಯಲ್ಲಪ್ಪ ಲಕ್ಕುಂಡಿ ಕಾರ್ಯಕ್ರಮ ನಿರ್ವಹಿಸಿದರು.