ಮದ್ದೂರು: ಕೂಲಿಕಾರರ ಹಿತ ಕಾಪಾಡಲು ಹಾಗೂ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡುವ ಮೂಲಕ ನ್ಯಾಯ ಕೊಡಿಸುವುದು ಕೃಷಿ ಕೂಲಿಕಾರರ ಸಂಘದ ಮುಖ್ಯ ಧ್ಯೇಯವಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್ ತಿಳಿಸಿದರು.
ತಾಲೂಕಿನ ಆತಗೂರು ಗ್ರಾಮದಲ್ಲಿ ಶುಕ್ರವಾರ ಕೃಷಿ ಕೂಲಿಕಾರರ ಆತಗೂರು ಗ್ರಾಮದ ಘಟಕ ಹಾಗೂ ಪದಾಧಿಕಾರಿಗಳನ್ನು ನೇಮಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಕೂಲಿಕಾರರ ಸಂಘವು ಬಡವರಿಗೆ ಮನೆ, ನಿವೇಶನ, ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬಗಳಿಗೆ ರೇಷನ್‌ನಲ್ಲಿ ಕೇರಳ ಮಾದರಿಯಲ್ಲಿ ದಿನನಿತ್ಯ ಬಳಸುವ 16 ಪದಾರ್ಥಗಳನ್ನು ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ ಎಂದರು.
ವೃದ್ಧಾಪ್ಯ ವೇತನ, ಅಂಗವಿಕಲ ವೇತನ 3 ಸಾವಿರ ರೂ.ಗೆ ಹೆಚ್ಚಿಸಬೇಕು. ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಉದ್ಯೋಗ ಖಾತ್ರಿಯಲ್ಲಿ 600 ಕೂಲಿ ನಿಗದಿ ಮಾಡಬೇಕು. ಕಾಯಕ ಬಂಧುಗಳಿಗೆ ಕೊಡುವ ಮಹಿಳೆಯರಿಗೆ ಐದು ರೂಪಾಯಿ, ಪುರುಷರಿಗೆ ನಾಲ್ಕು ರೂ. ಪ್ರೋತ್ಸಾಹಧನವನ್ನು 10 ರೂ.ಗೆ ಹೆಚ್ಚಿಸಬೇಕು ಮತ್ತು ಆತಗೂರು ಗ್ರಾಮಕ್ಕೆ ರಸ್ತೆ, ಚರಂಡಿ, ವಿದ್ಯುತ್ ದೀಪ ಸುಸಜ್ಜಿತ ಸ್ಮಶಾನ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಸಂಘದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಪಿ.ಶಿವರಾಜು, ಚಿಕ್ಕಮ್ಮಾ, ಭಾಗ್ಯಮ್ಮಾ, ಪದ್ಮಮ್ಮಾ, ಅಶೋಕ್ ಇತರರು ಇದ್ದರು.
ನೂತನ ಪದಾಧಿಕಾರಿಗಳ ಆಯ್ಕೆ: ಇದೇ ವೇಳೆ ತಾಲೂಕಿನ ಆತಗೂರು ಕೃಷಿ ಕೂಲಿಕಾರ ಸಂಘದ ಗ್ರಾಮ ಘಟಕವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪಿ.ಶಿವರಾಜು, ಕಾರ್ಯದರ್ಶಿಯಾಗಿ ಚಿಕ್ಕಮ್ಮಾ, ಉಪಾಧ್ಯಕ್ಷರಾಗಿ ಭಾಗ್ಯಮ್ಮ್ಮ, ಪದ್ಮಮ್ಮ, ಸಹ ಕಾರ್ಯದರ್ಶಿಗಳಾಗಿ ಅಶೋಕ, ರಾಮು, ಸಂಜೀವಮ್ಮ, ಸದಸ್ಯರಾಗಿ ನಾಗರತ್ನಾ, ಚಿಕ್ಕತಾಯಮ್ಮ, ಸವಿತಾ, ಲಕ್ಷ್ಮಮ್ಮ, ಪಾರ್ವತಮ್ಮ, ಸಣ್ಣಮ್ಮ ಅವರನ್ನು ಆಯ್ಕೆ ಮಾಡಲಾಯಿತು.