ಚನ್ನರಾಯಪಟ್ಟಣ: ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಲು ತಾಲೂಕು ಆಡಳಿತ ಸಜ್ಜಾಗಿದೆ. ಜನರು ಆತಂಕಪಡದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿ ಬಹು ಅಂಗಾಂಗ ಸಮಸ್ಯೆ ಬಳಲುತ್ತಿದ್ದಾರೆ. ಸೋಂಕಿತ ವೃದ್ಧನ ಸಂಪರ್ಕದಲ್ಲಿದ್ದ ನಾಲ್ವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಎರಡು ವಿಶೇಷ ವಾರ್ಡ್‌ಗಳನ್ನು ತೆರೆಯಲಾಗಿದೆ. ಔಷಧಗಳ ಕೊರತೆಯಾಗದಂತೆ ರಕ್ಷಾ ಸಮಿತಿ ಹಣದಲ್ಲೇ ನೇರವಾಗಿ ಖರೀದಿಸುವಂತೆ ಸೂಚನೆ ನೀಡಲಾಗಿದೆ. ಹಳ್ಳಿಗಳಲ್ಲಿನ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಚರಂಡಿಗಳನ್ನು ಸ್ಯಾನಿಟೈಸ್ ಮಾಡುವಂತೆ ಹಾಗೂ ಪಟ್ಟಣದ ಎಲ್ಲ ವಾರ್ಡ್‌ಗಳ ಸ್ವಚ್ಛತೆಗೆ ಗಮನಹರಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಗೆ ದಿನವಹಿ ಸುಮಾರು 700 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಮೇಲ್ಭಾಗದಲ್ಲಿ ಹೆಚ್ಚುವರಿಯಾಗಿ 20 ಬೆಡ್‌ಗಳ ನೂತನ ಕಟ್ಟಡ, ಪಟ್ಟಣದ ಆಸ್ಪತ್ರೆ ಮತ್ತು ಹಿರಿಸಾವೆ ಆಸ್ಪತ್ರೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಆಕ್ಸಿಜನ್ ಪ್ಲಾಂಟ್, ಸುಸಜ್ಜಿತ ಪ್ರಯೋಗಾಲಯ ಕಾಮಗಾರಿ ನಡೆಯುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಕಚೇರಿಯನ್ನು ಮೇಲಂಸ್ತಿಗೆ ವರ್ಗಾಯಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, ಆಸ್ಪತ್ರೆಯ ವಾರ್ಷಿಕ ಖರ್ಚು-ವೆಚ್ಚಗಳನ್ನು ಸಭೆಗೆ ಮಂಡಿಸಿದರು. ವಿವಿಧ ಮೂಲಗಳಿಂದ ಸಂಗ್ರಹವಾಗಿರುವ 1.37 ಕೋಟಿ ರೂ.ಗಳಲ್ಲಿ 1.06 ಕೋಟಿ ರೂ. ವೆಚ್ಚವಾಗಿದೆ. 30 ಲಕ್ಷ ರೂ. ಉಳಿತಾಯವಾಗಿದೆ ಎಂದರು.
ಅಗತ್ಯವಿರುವ ಔಷಧೋಪಕರಣಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದರು. ತುರ್ತಾಗಿ ಶಸ್ತ್ರಚಿಕಿತ್ಸಾ ಕೊಠಡಿ ಮೇಲ್ದರ್ಜೆಗೇರಿಸುವುದು, ಸ್ಕಾೃನಿಂಗ್ ಯಂತ್ರ, ಕೋವಿಡ್ ಹಿನ್ನೆಲೆಯಲ್ಲಿ ತುರ್ತು ಔಷಧ ಖರೀದಿ ಸೇರಿದಂತೆ ಅಗತ್ಯ ಸಲಕರಣೆಗಳ ಖರೀದಿಸುವ ಕುರಿತು ಶಾಸಕರ ಗಮನಕ್ಕೆ ತಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್ ಮಾತನಾಡಿ, ಕೋವಿಡ್ ಕುರಿತು ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದರು.
ತಹಸೀಲ್ದಾರ್ ಬಿ.ಎಂ.ಗೋವಿಂದ್‌ರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ವೈದ್ಯರು ಇದ್ದರು.