ಜಿಲ್ಲೆ

ಉಚಿತ ವೈದ್ಯಕೀಯ ಸೇವೆಗೆ ಸಿದ್ಧ

Chikkaballapur

ನಗರಗೆರೆ: ಮಕ್ಕಳಿಗೆ ಸಂಸ್ಕಾರದ ಜತೆಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿದ್ದು, ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ಬದ್ಧವಾಗಿದ್ದೇವೆ ಎಂದು ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಟ್ರಸ್ಟ್‌ನ ಮುಖ್ಯಸ್ಥ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ವಾಟದಹೊಸಹಳ್ಳಿಯಲ್ಲಿನ ಸತ್ಯಸಾಯಿ ಶಾಲೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಬಡ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಸಲುವಾಗಿ ಈ ಸಂಸ್ಥೆಯನ್ನು ಆರಂಭಿಸಿದ್ದು, ಸಂಪೂರ್ಣ ಉಚಿತ ಶಿಕ್ಷಣದ ಜತೆಗೆ ಆರೋಗ್ಯ ಸೇವೆ ನೀಡುತ್ತಿದ್ದೇವೆ. ಈ ಭಾಗದ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಭಕ್ತರ ಆಶಯದಂತೆ ಉನ್ನತ ಮಟ್ಟದ ಶಿಕ್ಷಣ ಕಲ್ಪಿಸಲಾಗುವುದು ಎಂದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಸಮಾಜದಲ್ಲಿ ಸ್ವಾಸ್ಥ್ಯ ಮತ್ತು ಸಾಮರಸ್ಯವನ್ನು ಕಾಪಾಡುವ ಜತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಹೊಂದಿ ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆ ನೀಡುತ್ತಿರುವುದು ಶ್ಲಾಘನೀಯ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಗವಾನ್ ಸಾಯಿಬಾಬ ಅವರ ಹೆಸರಿನಲ್ಲಿ ಭಕ್ತರ ಗಮನ ಸೆಳೆದು ಸೇವೆ ಮಾಡುತ್ತಿರುವುದು ಇತಿಹಾಸವಾಗಿದೆ. ಈ ಎಲ್ಲ ಉತ್ತಮ ಕಾರ್ಯಗಳಿಗೆ ಸಾಕ್ಷಿಯಾಗಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ಭಗವಂತ ಮತ್ತಷ್ಟು ಶಕ್ತಿ ನೀಡಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಇವರ ಈ ಕಾರ್ಯಕ್ಕೆ ನಾವು ಕೂಡ ಕೈ ಜೋಡಿಸಿ ಸ್ಥಳೀಯವಾಗಿ ಸರ್ಕಾರದಿಂದ ಭೂಮಿ ಮಂಜೂರು ಮಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಸತ್ಯಸಾಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ನರಸಿಂಹಮೂರ್ತಿ ಮಾತನಾಡಿ, ಇಡೀ ಜಗತ್ತಿಗೆ ಆಧ್ಯಾತ್ಮಿಕ ಚಿಂತನೆಯ ಜತೆಗೆ ಸಂಸ್ಕಾರಯುತ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಮತ್ತು ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಉಚಿತ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿರುವುದು ಅಚ್ಚರಿಯಾಗಿದೆ. ಈ ಎಲ್ಲ ಸೇವೆಗಳು ನಮ್ಮ ಜಿಲ್ಲೆಗೆ ದೊರಕಿರುವುದು ನಮ್ಮೆಲ್ಲರ ಅದೃಷ್ಟ ಎಂದರು.

ವೈದ್ಯ ಡಾ.ಸತೀಶ್ ಬಾಬು ಮಾತನಾಡಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಬಡವರಿಗೆ ಆರೋಗ್ಯ ಸೇವೆ ನೀಡಲು ಬದ್ಧವಾಗಿದ್ದೇವೆ. ನಗರದ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೇವೆಯನ್ನು ಈ ಭಾಗದಲ್ಲಿನ ಜನತೆಗೆ ನೀಡುವುದೇ ಸಾಯಿ ಸ್ವಾಸ್ಥ್ಯ ಕ್ಷೇಮ ಕೇಂದ್ರದ ಉದ್ದೇಶವಾಗಿದೆ ಎಂದು ತಿಳಿಸಿದರು.

ಸತ್ಯಸಾಯಿ ಶಾಲೆಯ ಮುಖ್ಯಸ್ಥ ಕೆ.ಎಚ್.ಸತ್ಯನಾರಾಯಣರಾವ್, ಅಧ್ಯಕ್ಷೆ ಸುಜಾತಮ್ಮ, ಮುಖಂಡರಾದ ಮದನ್ ಲಾಲ್ ಗುಪ್ತ, ಶೋಬನ, ಕೆ.ಎನ್.ಕೇಶವರೆಡ್ಡಿ, ವೆಂಕಟಾಚಲಬಾಬು, ಸತೀಶ್, ಸತ್ಯಸಾಯಿ ಮೆಮೋರಿಯಲ್ ಆಸ್ಪತ್ರೆಯ ಸಿಬ್ಬಂದಿ,ಪ್ರೌಢಶಾಲೆಯ ಶಿಕ್ಷಕರು ಅಶೋಕ್ ಕುಮಾರ್, ಕೆ.ಜಿ.ಕೃಷ್ಣಯ್ಯ, ಅಶ್ವತ್ಥನಾರಾಯಣ, ಸ್ಥಳೀಯ ಗ್ರಾಪಂ ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.

ಶೀಘ್ರದಲ್ಲೇ ಪಿಯುಸಿ ಕಾಲೇಜು ಆರಂಭ

ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಆರಂಭಿಸಿರುವ ಈ ಭಾಗದಲ್ಲಿ ಸ್ಥಳೀಯ ಶಾಸಕ ಶಿವಶಂಕರರೆಡ್ಡಿ, ಬಾಬಾ ಭಕ್ತರಾದ ಶೋಬನ ಮದನ್ ಲಾಲ್ ಗುಪ್ತ ಅವರ ಸಹಕಾರದಿಂದ ಪದವಿ ಪೂರ್ವ ಕಾಲೇಜನ್ನು ಆರಂಭಿಸಲಾಗುವುದು. ಪ್ರತ್ಯೇಕ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ಅದರ ಉದ್ಘಾಟನೆಗೆ ಮತ್ತೆ ಈ ಸ್ಥಳಕ್ಕೆ ಆಗಮಿಸುತ್ತೇನೆ ಎಂದು ಸದ್ಗುರು ಶ್ರೀಮಧುಸೂದನ ಸಾಯಿ ಅವರು ತಿಳಿಸಿದರು.