ಶಿವಮೊಗ್ಗ: ಬಿವೈಆರ್ ಅಭಿಮಾನಿ ಬಳಗದಿಂದ ಆ.16ರಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಜನ್ಮ ದಿನವನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಕೆಲ ಸಾಮಾಜಿಕ ಕಾರ್ಯಕ್ರಮದೊಂದಿಗೆ ಮನರಂಜನೆಗೆಂದು ಹಾಸ್ಯ ಕಲಾವಿದರಿಂದ ಹರಟೆ ಏರ್ಪಡಿಸಲಾಗಿದೆ.
ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ 20 ನಿಮಿಷಗಳ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಂಗವಿಕಲರಿಗೆ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಲಾಗುವುದು. ಬಳಿಕ ಹಾಸ್ಯ ಕಲಾವಿದರು ಹರಟೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಬಿವೈಆರ್ ಅಭಿಮಾನಿ ಬಳಗದ ಪ್ರಮುಖರು, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸ್ಯ ಕಲಾವಿದರಾದ ಹಿರೇಮಗಳೂರು ಕಣ್ಣನ್, ಗಂಗಾವತಿ ಪ್ರಾಣೇಶ್, ಸುಧಾ ಬರಗೂರು, ಬಸವರಾಜ ಮಾಮನಿ, ನರಸಿಂಹ ಜೋಷಿ, ಲಕ್ಷ್ಮೀಶ ಹೆಗಡೆ ಸೋಂದಾ, ನಾಗಶ್ರೀ ತ್ಯಾಗರಾಜ್ ಹರಟೆ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ನಾಗರಿಕರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ. ಬಿವೈಆರ್ ಜನ್ಮದಿನದ ಅಂಗವಾಗಿ ಆ.16ರ ಬೆಳಗ್ಗೆ 8.30ಕ್ಕೆ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು.
ಹಲವು ಅಭಿವೃದ್ಧಿ ಕಾರ್ಯ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶಿವಮೊಗ್ಗ ಮೂಲಕ ಪ್ರತಿ ದಿನ 28 ರೈಲುಗಳು ಸಂಚರಿಸುತ್ತಿವೆ. ರೈಲ್ವೆ ಮಾರ್ಗದ ವಿದ್ಯುದೀಕರಣವಾಗಿದೆ. ಫ್ಲೈ ಓವರ್ ನಿರ್ಮಾಣವಾಗಿದೆ. ಕೇಂದ್ರೀಯ ವಿದ್ಯಾಲಯಗಳನ್ನು ಮಂಜೂರು ಮಾಡಿಸಿದ್ದಾರೆ. ಪಾಸ್‌ಪೋರ್ಟ್ ಸೇವಾ ಕೇಂದ್ರದಿಂದ ಸಾವಿರಾರು ಮಂದಿ ಪ್ರಯೋಜನ ಪಡೆದಿದ್ದಾರೆ. ಜಿಲ್ಲೆಯಲ್ಲಿ ಮೊಬೈಲ್ ಟವರ್‌ಗಳ ಸಂಖ್ಯೆ ಹೆಚ್ಚಿದೆ. ವಿಮಾನ ನಿಲ್ದಾಣ ಉದ್ಘಾಟನೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಿಸಿದ್ದಾರೆ. ಆಯುರ್ವೇದ ವಿವಿ, ಸಿಗಂದೂರು ಸೇತುವೆ ಹೀಗೆ ಬಿವೈಆರ್ ಸಾಧನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಜಿಲ್ಲೆಗೆ ಅವರ ಕೊಡುಗೆ ಗಮನಿಸಿ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಸಂಭ್ರಮದಿಂದ ಅಭಿನಂದಿಸಲಾಗುತ್ತಿದೆ ಎಂದು ಡಿ.ಎಸ್.ಅರುಣ್ ತಿಳಿಸಿದರು.
ಆಕಾಶವಾಣಿಯಲ್ಲಿ ಬಿವೈಆರ್
ಗಣ್ಯರ ಜನ್ಮ ದಿನದ ಸಂದರ್ಭದಲ್ಲಿ ಅವರ ಸಾಧನೆಯನ್ನು ಜನರಿಗೆ ತಿಳಿಸುವ ವಿಶೇಷ ಕಾರ್ಯಕ್ರಮಕ್ಕೆ ಆಕಾಶವಾಣಿ ಭದ್ರಾವತಿ ಮುಂದಾಗಿದೆ. ಇದರ ಭಾಗವಾಗಿ ಭದ್ರಾವತಿ ಆಕಾಶವಾಣಿ ಎಫ್.ಎಂ. 103.5 ತರಂಗಾಂತರದಲ್ಲಿ ಆ.16ರ ಬೆಳಗ್ಗೆ 9.30 ರಿಂದ 10ರವೆಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ವಿಶೇಷ ಸಂದರ್ಶನ ಪ್ರಸಾರವಾಗಲಿದೆ. ಅವರ ಬಾಲ್ಯ, ರಾಜಕೀಯ ಪ್ರವೇಶ, ಜನಪ್ರತಿನಿಧಿಯಾಗಿ ಅವರು ಮಾಡಿದ ಉತ್ತಮ ಕೆಲಸಗಳನ್ನು ಕಾರ್ಯಕ್ರಮದಲ್ಲಿ ವಿವರಿಸಲಾಗುತ್ತದೆ ಎಂದು ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ತಿಳಿಸಿದ್ದಾರೆ.