ಕುಷ್ಟಗಿ: ಕನ್ನಡ ಸಾಹಿತ್ಯ ತನ್ನದೇ ಆದ ಭವ್ಯ ಪರಂಪರೆ ಹೊಂದಿದೆ. ನಾಡಿನ ಸಾಹಿತಿಗಳು ರಚಿಸಿರುವ ಕೃತಿಗಳ ಅಧ್ಯಯನ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ದೀಪಾವಳಿ ಹಾಗೂ ರಾಜ್ಯೋತ್ಸವ ನಿಮಿತ್ತ ಕಸಾಪ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮುಕ್ತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಾಹಿತಿಗಳಾಗಿ ಗುರುತಿಸಿಕೊಳ್ಳಬೇಕೆನ್ನುವವರು ಓದುವ ಅಭಿರುಚಿ ಹಾಗೂ ಹವ್ಯಾಸ ರೂಢಿಸಿಕೊಳ್ಳಬೇಕು. ರಚಿಸುವ ಕಾವ್ಯದ ಉದ್ದೇಶ ಹಾಗೂ ಅದರ ಪರಿಣಾಮಗಳ ಅರಿವು ಕವಿಗೆ ಇರಬೇಕು. ತಾಲೂಕಿನಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆಯಬೇಕಿದೆ. ಅದ್ದೂರಿಗಿಂತ ವಿಚಾರಗಳಿಗೆ ಆದ್ಯತೆ ನೀಡಿ ಸಮ್ಮೇಳನ ಆಯೋಜಿಸಬೇಕಿದೆ. ಸಮ್ಮೇಳನದಲ್ಲಿ ರೈತರು ಸೇರಿದಂತೆ ಎಲ್ಲ ವರ್ಗಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವಾಗಬೇಕಿದೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯವಾಗಬೇಕಿದೆ ಎಂದರು.
ಸಾಹಿತಿ ನಾಗರಾಜ ಹೀರಾ ಮಾತನಾಡಿ, ಕವಿಗಳ ಸಂಖ್ಯೆ ಹೆಚ್ಚಾದಂತೆ ಬರವಣಿಗೆಯ ಗುಣಾತ್ಮಕತೆ ಕಡಿಮೆಯಾಗುತ್ತಿದೆ. ಕಾವ್ಯ ರಚನೆಯಲ್ಲಿ ಹಲವು ಬಾರಿ ಮುರಿದು ಕಟ್ಟುವ ಕಾರ್ಯವಾಗಬೇಕಿದೆ. ಕವಿಗೆ ಸಾಮಾಜಿಕ ಜವಾಬ್ದಾರಿ ಇದೆ. ತನ್ನನ್ನು ತಾನು ಪ್ರೀತಿಸುವುದನ್ನು ಕಲಿತ ಹಾಗೂ ಸಮಾಜವನ್ನು ಹೃದಯದ ಕಣ್ಣಿನಿಂದ ನೋಡುವಾತ ಮಾತ್ರ ಶ್ರೇಷ್ಠ ಕಾವ್ಯ ರಚಿಸುತ್ತಾನೆ. ಶ್ರೇಷ್ಠತೆಯ ಅರಿವಿನೊಂದಿಗೆ ಕಾವ್ಯ ರಚಿಸಿ ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಕಸಾಪದಿಂದ ದತ್ತಿ ಉಪನ್ಯಾಸ, ಕವಿಗೋಷ್ಠಿ ಆಯೋಜಿಸಲಾಗುತ್ತಿದೆ. ಉದಯೋನ್ಮುಖ ಸಾಹಿತಿಗಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸದುಪಯೋಗ ಪಡೆದು ಕೊಳ್ಳಬೇಕಿದೆ ಎಂದರು. ಕೊಪ್ಪಳದ ಹಿರಿಯ ಸಾಹಿತಿ ಎ.ಎಂ.ಮದರಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ, ಕಲಾವಿದ ಶರಣಪ್ಪ ವಡಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುದರಿ, ಕಸಾಪ ಕೇಂದ್ರ ಪ್ರತಿನಿಧಿ ನಬಿಸಾಬ ಕುಷ್ಟಗಿ, ಪ್ರಮುಖರಾದ ತಾಜುದ್ದೀನ್ ದಳಪತಿ, ಮಹೇಶ ಹಡಪದ್, ಬಸವರಾಜ ಗಾಣಿಗೇರ ಇತರರು ಇದ್ದರು. ಶಿವಕುಮಾರ ಗಂಧದಮಠ, ಗವಿಸಿದ್ದಪ್ಪ ಉಪ್ಪಾರ, ಶರಣು ಎಂ.ಗುಡದೂರು ಇತರರು ಕವನ ವಾಚನ ಮಾಡಿದರು.