ಆಲಮೇಲ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಭವ ದಾಟುವ ದಾರಿ ಎಂಬ ಗ್ರಂಥವನ್ನು ಕಮಸಿಯ ರಘುನಾಥಭಟ್ಟ ಜೋಶಿ ಲೋಕಾರ್ಪಣೆಗೊಳಿಸಿದರು. ಅಭಿನವ ರುದ್ರಮುನಿ ಶಿವಾಚಾರ್ಯರು, ನರಸಿಂಹ ಮಾಹಾರಾಜರು, ಮಲ್ಲಯ್ಯ ಹಿರೇಮಠ ಮತ್ತಿತರರಿದ್ದರು 
ಜಿಲ್ಲೆ

ಗ್ರಂಥಗಳ ಓದು ಬಾಳಿಗೆ ಬೆಳಕು ನೀಡಬಲ್ಲದು

ಸಿಂದಗಿ: ನಂಬಿದ ಭಕ್ತರ ಉದ್ಧಾರಕ್ಕಾಗಿ ತಮ್ಮ ಸಾರ್ಥಕ ಜೀವನವನ್ನು ಕಲಿಯುಗದ ಕಲ್ಪತರುವಾಗಿ ರೂಪಿಸಿಕೊಂಡಿದ್ದ ಸದ್ಗುರು ಭೀಮಾಶಂಕರರು ಜಾತಿ, ಮತ ಬೇಧಗಳನ್ನು ತೊರೆದು ಸಮಾಜದ ಶಾಂತಿ ಮತ್ತು ಸಮಾನತೆಯನ್ನು ಸಾರಿದರು ಎಂದು ಕುಮಸಿಯ ತ್ರಿವಿಕ್ರಮ ದತ್ತ ಪಾದುಕಾ ಪೀಠದ ರಘುನಾಥಭಟ್ ಜೋಶಿ ಹೇಳಿದರು.

ಆಲಮೇಲ ತಾಲೂಕಿನ ಮಂಗಳೂರ ಗ್ರಾಮದಲ್ಲಿ ಸಮರ್ಥ ಸದ್ಗುರು ಭೀಮಾಶಂಕರ ಮಹಾರಾಜರ ಪುಣ್ಯರಾಧನೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ವಿರುಪಾಕ್ಷಪ್ಪ ಸಿಂಪಿ ಅವರ ಭವ ದಾಟುವ ದಾರಿ ಆಧ್ಯಾತ್ಮಿಕ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಭೀಮಾಶಂಕರ ಮಹಾರಾಜರ ಬದುಕನ್ನು ಭವ ದಾಟುವ ದಾರಿ ಎಂಬ ಗ್ರಂಥದ ಮೂಲಕ ಪರಿಚಯಿಸಿಕೊಳ್ಳಬಹುದು ಎಂದರು.

ಸಾನ್ನಿಧ್ಯ ವಹಿಸಿದ್ದ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಗ್ರಂಥಗಳು ಮನುಜರಿಗೆ ಧರ್ಮ ಮತ್ತು ಜ್ಞಾನದ ಬೆಳಕು ನೀಡುತ್ತವೆ. ಪ್ರತಿಯೊಬ್ಬರಿಗೂ ಓದಿನ ಮಹತ್ವ ತಿಳಿದಿರಬೇಕು. ನಮ್ಮ ಪೂರ್ವಜರು ಓದಿ ಅನುಭವ ಪಡೆದು ಅನೇಕ ಗ್ರಂಥ, ಪುರಾಣಗಳನ್ನು ರಚಿಸಿದ್ದು, ಇಂದು ಅವುಗಳು ನಮ್ಮ ಬಾಳಿಗೆ ಬೆಳಕು ನೀಡಬಲ್ಲವು ಎಂದರು.

ಬಮ್ಮನಹಳ್ಳಿಯ ನರಸಿಂಹ ಮಹಾರಾಜರು ಮಾತನಾಡಿ, ಭಕ್ತರ ಬದುಕು ಹಸನಾಗಿಸುವತ್ತ ನಡೆದ ಭೀಮಾಶಂಕರ ಮಹಾರಾಜರ ಜೀವನ ಚೈತ್ರವನ್ನು ತನ್ನೊಡಲಲ್ಲಿರಿಸಿಕೊಂಡಿರುವ ಭವ ದಾಟುವ ದಾರಿ ಗ್ರಂಥವನ್ನು ಭಕ್ತರು ಓದಿ, ತಮ್ಮ ಜೀವನ ಕ್ರಮವನ್ನು ಜಯಿಸಬೇಕು ಎಂದು ಹೇಳಿದರು.

ಮಹಾಂತೇಶ ಶಾಸ್ತ್ರಿಗಳು ಮಾತನಾಡಿದರು. ಮಂಗಳೂರಿನ ಮಲ್ಲಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗುರು ಹಿರೇಮಠ ಇತರರಿದ್ದರು.
ಗ್ರಂಥ ರಚನೆಕಾರ ವಿರುಪಾಕ್ಷಪ್ಪ ಸಿಂಪಿ ಹಾಗೂ ಗ್ರಂಥ ದಾನಿ ನ್ಯಾಯವಾದಿ ಭಗವಂತ ರೇವೂರ ಅವರನ್ನು ಜಾತ್ರಾ ಮಹೋತ್ಸವ ಸಮಿತಿ ಪರವಾಗಿ ಸನ್ಮಾನಿಸಲಾಯಿತು. ಶಿಕ್ಷಕ ಸಿದ್ದಪ್ಪ ಮಾರ‌್ಯಾಳ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.