ವಿಜಯವಾಣಿ ಸುದ್ದಿಜಾಲ ಉಡುಪಿ
ಹೆಚ್ಚು ಪುಸ್ತಕ ಓದುವುದರಿಂದ ಮಕ್ಕಳು ವಾನಸಿಕವಾಗಿ ಪರಿಪಕ್ವರಾಗುತ್ತಾರೆ. ಜೀವನದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಗಳಿಸುತ್ತಾರೆ. ವಿವೇಚನಾಶಾಲಿಗಳಾಗಿ ಉತ್ತಮ ನಾಗರಿಕರಾಗುತ್ತಾರೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಡಾ.ಅಶೋಕ ಕಾಮತ್ ಅಭಿಪ್ರಾಯಪಟ್ಟರು.
ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ ಮಾತನಾಡಿ, ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಉತ್ತಮ ಫಲಿತಾಂಶ ಗಳಿಸಬಹುದು ಎಂದರು.
ಉಡುಪಿ ಡಯಟ್‌ನ ಉಪನ್ಯಾಸಕ ಯೋಗಾನರಸಿಂಹ ಸ್ವಾಮಿ ಕೆ.ಎಂ.ಮಾತನಾಡಿ, ಮಕ್ಕಳ ಕಲಿಕೆಗೆ ಪೂರಕವಾಗಿ ಪಾಲಕರ ಜವಾಬ್ದಾರಿ ಮತ್ತು ಅಭ್ಯಾಸಗಳ ಬಗ್ಗೆ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ನವ್ಯಾ ನಾಯಕ್, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಸಕ ಯಶಪಾಲ್ ಸುವರ್ಣ ತಮ್ಮ ಪಾಲಕರ ಸ್ಮರಣಾರ್ಥ ಪುಷ್ಪಾನಂದ ಫೌಂಡೇಷನ್ ವತಿಯಿಂದ ನೀಡಿದ್ದ ಸಿಹಿತಿಂಡಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಇಂದಿರಾ ಬಿ. ಸ್ವಾಗತಿಸಿದರು. ಶಿಕ್ಷಕ ಶೇಖರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.