ಮೈಸೂರು: ಸಾಹಿತ್ಯ ಓದುವುದರಿಂದ ಮಾನಸಿಕ ನೆಮ್ಮದಿ ಹಾಗೂ ಜ್ಞಾನಾರ್ಜನೆಗೂ ಸಹಕಾರಿ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.
ಮೈಸೂರು ಸಾಹಿತ್ಯ ದಾಸೋಹದಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶನಿವಾರ ಆಯೋಜಿಸಿದ್ದ 113ನೇ ಸಾಹಿತ್ಯ ದಾಸೋಹ ಹಾಗೂ ವಾಣಿ ಸುಬ್ಬಯ್ಯಅವರ ಸಾಹಿತ್ಯ ಸಿಂಚನ-ಗದ್ಯ ಕೃತಿ, ರಂಗರಂಗಿನ ಪದಗಳು ಮಕ್ಕಳ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಟಿವಿ ಜತೆಗೆ ಮೊಬೈಲ್ ಬಳಕೆ ಹೆಚ್ಚಾದ ನಂತರ ನೈತಿಕ ಮೌಲ್ಯ ಕುಸಿದು ಮಾನವೀಯತೆ ಕಡಿಮೆಯಾಗುತ್ತಿವೆ. ಪರಸ್ವರ ಸಂಬಂಧಗಳೇ ಇಲ್ಲ ಎನ್ನುವಂತೆ ಮನೆಯಲ್ಲಿ ಇರುವವರೇ ಮೊಬೈಲ್‌ನಲ್ಲಿ ತಲ್ಲೀನರಾಗುವಂತಹ ಪರಿಸ್ಥಿತಿ ಇದೆ. ಹೀಗಾಗಿ ಸದಾ ಮಾನಸಿಕ ನೆಮ್ಮದಿ ನೀಡುವ ಹಾಗೂ ಜ್ಞಾನಾರ್ಜನೆಗೂ ಕಾರಣವಾಗಿ ನೈತಿಕ ಹಾಗೂ ಮಾನವೀಯ ಮೌಲ್ಯ ಹೆಚ್ಚಿಸುವಂತಹ ಸಾಹಿತ್ಯ ಓದಬೇಕು ಎಂದು ಅವರು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ಸೇವೆ ಸಲ್ಲಿಸಿರುವ ಆಧಾರದ ಮೇಲೆ
ವಾಣಿ ಸುಬ್ಬಯ್ಯ ಅವರು ಸಾಹಿತ್ಯ ಸಿಂಚನ ಕೃತಿ ರಚಿಸಿದ್ದಾರೆ. ಇಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಶೆಕ್ಷಣಿಕ, ನಾಟಕ, ಪ್ರಬಂಧ, ವ್ಯಕ್ತಿಚಿತ್ರ, ನೀತಿ ಕತೆಗಳು, ಪ್ರವಾಸ ಕಥನದ ಆಯಾಮಗಳನ್ನು ಮೇಳೈಸಿವೆ. ಒಂದು ರೀತಿ ಇದರಲ್ಲಿ ಸಮೃದ್ಧ ಓದಿಗೆ ಬೇಕಾದ ಎಲ್ಲ ವಿಷಯಗಳು ಇಲ್ಲಿ ಅಡಕವಾಗಿವೆ ಎಂದರು.
ಮಕ್ಕಳ ಕವನಗಳಲ್ಲಿ ಹಬ್ಬ, ಸಂತೆ, ಜಾತ್ರೆ, ಪ್ರಾಣಿ, ಪಕ್ಷಿ, ಪರಿಸರ, ಯೋಧ, ಅನ್ನದಾತ, ಕನ್ನಡ ನಾಡು-ನುಡಿಯ ವಿಚಾರಗಳನ್ನು ಸಚಿತ್ರವಾಗಿ ಕಟ್ಟಿಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದ, ಬಸವಣ್ಣ, ಅಕ್ಕ ಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಸಾಲುಮರದ ತಿಮ್ಮಕ್ಕ, ತುಳಸಿಗೌಡ, ಪುಟ್ಟೀರಮ್ಮ ಮೊದಲಾದವರ ವ್ಯಕ್ತಿಚಿತ್ರನ್ನು ಕುರಿತ ಕವನಗಳಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾ ರಂಗನಾಥ್, ರಾಜೇಶ್ವರಿ ಶಿವರಾಂ, ಆಶಾ ಅರಸ್ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಸಾಹಿತ್ಯ ದಾಸೋಹದ ಸಂಸ್ಥಾಪಕ ಎಂ.ಆರ್. ಆನಂದ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಎ.ಆರ್.ಶ್ರೀಧರ್, ಸವಿಗನ್ನಡ ಸಂಪಾದಕ ರಂಗನಾಥ್ ಮೈಸೂರು, ಮೈಸೂರು ಸಾಹಿತ್ಯ ದಾಸೋಹ ಸಂಚಾಲಕಿ ಪದ್ಮಾ ಆನಂದ್, ಬಿ.ಪಿ.ಅಶ್ವತ್ಥ ನಾರಾಯಣ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಜಿ. ಪ್ರಕಾಶ್, ಚುಕ್ಕಿ ಚಿತ್ರ ಕಲಾವಿದ ಮೋಹನ್ ವೇರ್ಣೇಕರ್, ಆಯೋಜಕರಾದ ಪ್ರೊ.ಆರ್.ಎ. ಕುಮಾರ್, ಹರೀಶ್, ರಾಜಗೋಪಾಲ್ ಚಾರಿ, ಬಿ.ಕೆ. ಮೀನಾಕ್ಷಿ, ಎನ್.ವಿ. ರಮೇಶ್, ಉಷಾ ರಮೇಶ್ ಎಂ. ಮುತ್ತುಸ್ವಾಮಿ ಇತರರು ಇದ್ದರು.