ಜಿಲ್ಲೆ

ಸರ್ಕಾರಿ ಶಾಲೆಗಳಲ್ಲಿ ಓದು ಅಭಿಯಾನ ಆರಂಭ

ಗಂಗಾಧರ ಬಿ ವಿ

* ಮಕ್ಕಳಿಗೆ 21 ದಿನ ವಿವಿಧ ಚಟುವಟಿಕೆಗಳು

* ಸ್ಥಳಿಯ ಗ್ರಂಥಾಲಯಕ್ಕೆ ಭೇಟಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಶಾಲಾ ಮಕ್ಕಳಿಗೆ ಪುಸ್ತಕ ಓದುವ ಆಸಕ್ತಿ ಬೆಳೆಸಲು ಮುಂದಾಗಿರುವ ಶಿಕ್ಷಣ ಇಲಾಖೆ 21 ದಿನಗಳ ಅಭಿಯಾನದ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬಲವರ್ಧನೆಗೊಳಿಸಲು ಮುಂದಾಗಿದೆ.

ಇಂದಿನ ಓದುಗರು ನಾಳಿನ ನಾಯಕರು ಎಂಬಂತೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು, ಓದುವ ಸಂಸತಿ ಬಿತ್ತುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ಶಾಲಾ ಮಕ್ಕಳು ಮೊಬೈಲ್​ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಓದುವುದರಿಂದ ದೂರ ಉಳಿಯುತ್ತಿದ್ದಾರೆ. ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಿಕೊಳ್ಳದೆ ಶಿಕ್ಷಣದ ಕಡೆ ಗಮನ ಕಡಿಮೆಯಾಗುತ್ತಿದೆ. ಈ ಕಾರಣದಿಂದ ಮಕ್ಕಳಲ್ಲಿ ಓದು, ಪುಸ್ತಕ, ಪಠ್ಯೇತರ ಚಟುವಟಿಕೆ ಕತೆಗಳ ಉಪಯೋಗ ಶಿಕ್ಷಣದ ಮಹತ್ವ ತಿಳಿಸುವ ಸದುದ್ದೇಶದಿಂದ ಸರ್ಕಾರಿ ಶಾಲೆಗಳ ಬಲವರ್ಧನೆ ಜತೆಗೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಬಗ್ಗೆ ತಿಳಿಸುವುದು ಸೇರಿ (ಸೆ.3ರಿಂದ )ಸೋಮವಾರದಿಂದ 21 ದಿನ ಸರ್ಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿ ಮಕ್ಕಳಿಗೆ ಓದುವ ಅಭಿಯಾನ ನಡೆಸುತ್ತಿದೆ. 21 ದಿನ ಒಂದೊಂದು ಚಟುವಟಿಕೆ ನೀಡಲಿದ್ದು. ಪ್ರತಿದಿನ ಅರ್ಧ ಗಂಟೆ ವಿದ್ಯಾರ್ಥಿಗಳು ಚಟುವಟಿಕೆ ಮಾಡಬೇಕಿದೆ. ತನಗಿಷ್ಟವಾದ ಪುಸ್ತಕ ಓದುವುದು, ಮತ್ತೊಂದು ದಿನ ಕಥೆ ಹೇಳುವುದು, ಓದಿದ ಪುಸ್ತಕದ ಮಾಹಿತಿ ತಿಳಿಯುವುದು, ಗಟ್ಟಿಯಾಗಿ ಕಥೆ ಹೇಳುವುದು, ಮನೆಯಲ್ಲಿ ಓದುವುದನ್ನು ತಿಳಿಹೇಳುವುದು, ಪುಸ್ತಕಗಳ ಮಹತ್ವ ತಿಳಿಸಿಕೊಡುವುದು, ಪುಸ್ತಕಗಳನ್ನು ದೇಣಿಗೆ ನೀಡುವುದು, ಜಾಥಾ ನಡೆಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ನಡೆಸಿ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲಿದೆ.

ಗ್ರಂಥಾಲಯಗಳಿಗೆ ಭೇಟಿ :

ಮಕ್ಕಳಿಗೆ ಗ್ರಂಥಾಲಯಗಳ ಮಹತ್ವ ತಿಳಿಸಲು ಮುಂದಾಗಿರುವ ಶಿಕ್ಷಣ ಇಲಾಖೆ ಸ್ಥಳಿಯ ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದಿ ಅದರ ಪ್ರಯೋಜನ ತಿಳಿಸಿಕೊಡಲು ಮುಂದಾಗಿದೆ.

ಚಟುವಟಿಕೆ

ಓದಿಗಷ್ಟೇ ಅಭಿಯಾನ ಸೀಮಿತವಾಗಿರದಂತೆ ರಸಪ್ರಶ್ನೆ, ಚಿತ್ರಕಲೆ, ನಾಟಕ ಅಭಿನಯ, ಕಥೆ ತುಣುಕು ಅಭಿವ್ಯಕ್ತಪಡಿಸುವುದು, ಮಕ್ಕಳೇ ಸ್ವಂತ ಕಥೆ ರಚಿಸಲು ಪ್ರೇರೇಪಿಸುವುದು, ಮಕ್ಕಳ ಪಾಲಕರಿಂದ ಕಥೆ ಹೇಳಿಸುವುದು, ದಿನ ಪತ್ರಿಕೆ ಓದಿಸಿ ಇದರ ಮಹತ್ವ ತಿಳಿಸುವುದು, ಮನೆಯಲ್ಲಿ ಓದುವ ಹವ್ಯಾಸ ರೂಢಿಸುವುದು ಹೀಗೆ ಹಲವು ಚಟುವಟಿಕೆ ಮೂಲಕ ಮಕ್ಕಳನ್ನು ಓದಿನಲ್ಲಿ ಆಸಕ್ತಿ ಬೆಳೆಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಹಿರಿಯ ಶಿಕ್ಷಕರು ಭಾಗಿ

ಶಿಕ್ಷಕರು ಅಭಿಯಾನದ ಸಂದರ್ಭದಲ್ಲಿ ಭೇಟಿ ನೀಡಿ ಮಕ್ಕಳಿಗೆ ಓದುವ ಬಗ್ಗೆ ಹೇಳಿಕೊಡುವುದು, ಪುಸ್ತಕ ಓದಿನಿಂದ ಉಪಯೋಗ, ಕಥೆ, ಗ್ರಂಥಾಲಯಗಳ ಮಹತ್ವ ತಿಳಿಸಿಕೊಟ್ಟು ಮತ್ತಷ್ಟು ಸ್ಪೂರ್ತಿ ತುಂಬಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಿದೆ.

ದಾಖಲು

ಓದುವ ಅಭಿಯಾನವನ್ನು ಆಯಾ ಶಾಲೆಗಳಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ 11&30ರ ಸಮಯದಲ್ಲಿ ಅರ್ಧಗಂಟೆ ನಡೆಸಲು ತಿಳಿಸಿರುವ ಶಿಕ್ಷಣ ಇಲಾಖೆ, ಮಕ್ಕಳಲ್ಲಿ ಓದು, ಇನ್ನಿತರ ಚಟುವಟಿಕೆಗಳ ಚಿತ್ರಣಗಳನ್ನು ಪೋಟೋ, ವಿಡಿಯೋ ತುಣುಕುಗಳ ಮೂಲಕ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ತಲುಪಿಸಲು ಸೂಚಿಸಿದೆ. ಇದರಿಂದ ಪ್ರತಿ ಶಾಲಾ ಹಂತದಲ್ಲಿ ಚಟುವಟಿಕೆಗಳು ಸೂಕ್ತ ರೀತಿಯಲ್ಲಿ ನಡೆದು ಅಭಿಯಾನ ಯಶಸ್ವಿಯಾಗುವಂತೆ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಿದೆ.

ಓದುವುದರಿಂದ ಮಕ್ಕಳಲ್ಲಿ ಕಲ್ಪನಾಶಕ್ತಿ, ಆಸಕ್ತಿ ಹೆಚ್ಚುತ್ತದೆ. ಮಕ್ಕಳು ಇಂದು ಹೆಚ್ಚಾಗಿ ಮೊಬೈಲ್​, ಟಿವಿ ಕಡೆ ಕೇಂದ್ರೀಕೃತವಾಗುತ್ತಿದ್ದಾರೆ. ಇದನ್ನು ಮನಗಂಡು ಶಿಕ್ಷಣ ಇಲಾಖೆ ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸಲು ಅಭಿಯಾನ ನಡೆಸುತ್ತಿದೆ. ತಾಲೂಕಿನ ಶಾಲೆಗಳಲ್ಲಿ ಅಭಿಯಾನ ಯಶಸ್ವಿಯಾಗಿ ಪ್ರಾರಂಭವಾಗಿದ್ದು, ಮಕ್ಕಳಿಂದ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಮಕ್ಕಳಲ್ಲಿ ಓದಿನ ಕೌಶಲ ಹೆಚ್ಚಿಸುವುದು ಅಭಿಯಾನದ ಪ್ರಮುಖ ಉದ್ದೇಶ.> ಸೋಮಲಿಂಗಯ್ಯ, ಬಿಇಓ  ರಾಮನಗರ ತಾಲೂಕುಶಿಕ್ಷಣ ಇಲಾಖೆ ಅಭಿಯಾನ ನಡೆಸುತ್ತಿರುವುದು ಮಕ್ಕಳಿಗೆ ಉಪಯುಕ್ತವಾಗಿದೆ. ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳಿಗೆ ಚಿನ್ನದ ಶಿಕ್ಷಣ. ಆದರೆ ಇಂದು ಹೆಚ್ಚಿನ ಮಕ್ಕಳು ಮೊಬೈಲ್​, ಟಿವಿ ಕಡೆ ಗಮನ ಕೇಂದ್ರೀಕರಿಸಿರುವ ಕಾರಣ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಓದು ಕಡಿಮೆಯಾಗುತ್ತಿದೆ. ಇಂತಹ ಚಟುವಟಿಕೆಗಳಿಂದ ಆಸಕ್ತಿ ಬೆಳೆಸಿಕೊಳ್ಳಬಹುದು. ಶಿಕ್ಷಣ ಇಲಾಖೆ ಕಾರ್ಯ ಉತ್ತಮವಾಗಿದೆ. > ಎನ್​.ಎಸ್​. ಲಿಂಗೇಗೌಡ, ನಾಗೋಹಳ್ಳಿ.