ಹೊನ್ನಾವರ: ಪುಸ್ತಕ ಓದುವುದು ಪುಣ್ಯದ ಕೆಲಸ. ಸಮಯ ಹೊಂದಿಸಿಕೊಂಡು ಪುಸ್ತಕವನ್ನು ಓದಬೇಕು ಎಂದು ಹೃದಯರೋಗ ತಜ್ಞ ಡಾ. ಪ್ರಕಾಶ ನಾಯ್ಕ ಹೇಳಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಜನಪದ ಸಾಹಿತ್ಯ ಪ್ರಕಟನ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಲ್.ಆರ್. ಹೆಗಡೆ ಅವರು ಸಂಪಾದಿಸಿದ ಮೂರನೇ ಸಂಪುಟ ‘ನಾಮಧಾರಿ ಜನಪದ ಕಥನ ಗೀತೆಗಳು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಕೀಲ ವಿಕ್ರಮ ನಾಯ್ಕ ಮಾತನಾಡಿ, ಇಂದು ನಮ್ಮಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಜಾನಪದ ಗೀತೆ ಹಾಡುವ ಕಲೆ ಮರೆಯಾಗಿದೆ. ಇಂದಿನವರು ಅಂತಹ ಹಾಡುಗಳ ಕಲಿಯುವ ಇಚ್ಚೆ ತೋರುತ್ತಿಲ್ಲ ಎಂದು ವಿಶಾದ ವ್ಯಕ್ತಪಡಿಸಿದರು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ನಾಮಧಾರಿ ಸಮಾಜಕ್ಕೆ ಭವ್ಯ ಪರಂಪರೆ ಮತ್ತು ಇತಿಹಾಸವಿದೆ. ಇದನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಅವಶ್ಯಕತೆಯಿದೆ. ಜಾನಪದ ಗೀತೆಗಳು ಹಿಂದಿನ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸ ಮಾಡುತ್ತವೆ ಎಂದರು.
ಜಾನಪದ ಹಾಡುಗಾರ್ತಿ ಗೌರಿ ನಾಗಪ್ಪ ನಾಯ್ಕ ಶಿರೂರು ಅವರನ್ನು ಸನ್ಮಾನಿಸಲಾಯಿತು. ಗೌರಿ ನಾಯ್ಕ ಮತ್ತು ಗೋವಿಂದ ನಾಯ್ಕ ಕೋನಳ್ಳಿ ಜನಪದ ಗೀತೆ ಪ್ರಸ್ತುತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುಧೀಶ ನಾಯ್ಕ, ಚಿಕ್ಕನಕೋಡ ವಿಎಸ್ಎಸ್ ಅಧ್ಯಕ್ಷ ಆರ್.ಪಿ.ನಾಯ್ಕ , ಆರ್.ಎಂ.ನಾಯ್ಕ ನವಿಲಗೋಣ, ರಾಮಚಂದ್ರ ನಾಯ್ಕ, ವಿ.ಜಿ.ನಾಯ್ಕ ಇದ್ದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ಪ್ರಾಸ್ತಾವಿಕ ಮಾತನಡಿದರು. ಉಪನ್ಯಾಸಕ ಉಮೇಶ ನಾಯ್ಕ ಶಿರಸಿ ಗ್ರಂಥ ಪರಿಚಯಿಸಿದರು. ಶಿಕ್ಷಕ ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.