ಚಿಕ್ಕಮಗಳೂರು: ಪುಸ್ತಕಗಳು ವೈಯಕ್ತಿಕ ಬೆಳವಣಿಗೆ, ಮಾನಸಿಕ ಆರೋಗ್ಯ ವೃದ್ಧಿ ಮತ್ತು ಒತ್ತಡದಿಂದ ಹೊರಗೆ ಬರಲು ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಲು ಕಾರಣವಾಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕಲಾಮಂದಿರದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಿಲ್ಲಾಡಳಿತ, ಜಿಪಂ, ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥ ಪಾಲಕ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರ ಜನ್ಮದಿನಾಚರಣೆ ಮತ್ತು ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್.ಆರ್.ರಂಗನಾಥನ್ ಅವರು ಗ್ರಂಥಾಲಯಗಳ ಪರಿಕಲ್ಪನೆಯೊಂದಿಗೆ ಇಂದು ಸಮಾಜದ ಪ್ರತಿಯೊಬ್ಬರಿಗೂ ಓದಲು ಪುಸ್ತಕ ಸಿಗುವಂತೆ ಮಾಡಿದ್ದಾರೆ. ಅವರ ಆದರ್ಶ ಪಾಲನೆ ಅಗತ್ಯವಾಗಿದೆ. ಗ್ರಂಥಾಲಯಗಳು ಜ್ಞಾನ ಭಂಡಾರ ಮಾತ್ರವಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಕ್ತಿ ನೀಡುವ ಕೇಂದ್ರಗಳಾಗಿವೆ ಎಂದು ತಿಳಿಸಿದರು.
ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥಪಾಲಕ ಸಂಘದ ರಾಜ್ಯಾಧ್ಯಕ್ಷ ಪಂಪನಗೌಡ ಪಾಟೀಲ್ ಮಾತನಾಡಿ, ಗ್ರಂಥಪಾಲಕರು ಎಲೆ ಮರೆಯ ಕಾಯಿಯಂತೆ ಯಾವ ಪ್ರಚಾರದ ಹಂಗಿಲ್ಲದೆ ತೆರೆ ಮರೆಯಲ್ಲಿ ಜ್ಞಾನ ಪ್ರಸಾರ ಮಾಡುವಂತಹ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಅಭಿವೃದ್ಧಿಗೆ ತಮ್ಮದೇ ಕಾಣಿಕೆ ನೀಡುತ್ತಿದ್ದಾರೆ ಎಂದರು.
ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥಪಾಲಕರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಪರಮೇಶ್ ಮಾತನಾಡಿ, ಡಾ.ಎಸ್.ಆರ್.ರಂಗನಾಥನ್ ಭಾರತದಲ್ಲಿ ಗ್ರಂಥಾಲಯ ವಿಜ್ಞಾನಕ್ಕೆ ವೈಜ್ಞಾನಿಕ ತಳಹದಿ ನೀಡಿದಂತಹ ಅಗ್ರಮಾನ್ಯರಾಗಿದ್ದಾರೆ. ಭಾರತದಲ್ಲಿ ಗ್ರಂಥಪಾಲಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಯಾಧಿಕಾರಿ ಹಸೀನಾ ತಾಜ್, ಜಿ.ಉಮೇಶ್, ಗ್ರಂಥಾಲಯ ಪ್ರಾಧಿಕಾರದ ಸದಸ್ಯ ರವೀಶ್ ಕ್ಯಾತನಬೀಡು, ಪಿಡಿಓ ಸಂಘದ ಅಧ್ಯಕ್ಷ ಯೋಗೀಶ್, ಗ್ರಾಮ ಡಿ.ಜಿ.ವಿಕಸನ ಜಿಲ್ಲಾ ಸಂಯೋಜಕರಾದ ನವೀನ್, ಆನಂದ್ ಮತ್ತಿತರರಿದ್ದರು.