ಜಿಲ್ಲೆ

ಡಾ.ಬಿ.ಆರ್.ಅಂಬೇಡ್ಕರ್‌ಥ್ೀವರ ಸಮಗ್ರ ಬರಹ ಓದಿ; ಡಾ.ಬಿ.ಸಿ.ಸತೀಶ

ಮಡಿಕೇರಿ: ಭಾರತ ಸಂವಿಧಾನದ ಪಿತಾಮಹ, ಸಾಮಾಜಿಕ ಕ್ಷೇತ್ರದ ಸುಧಾರಕ ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಗ್ರ ಬರಹಗಳು ಮತ್ತು ಭಾಷಣಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕಿವಿಮಾತು ಹೇಳಿದರು.


ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ’ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಓದು’ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸ್ವಾತಂತ್ರ್ಯ ಭಾರತದ ಮೊದಲ ಕಾನೂನು ಸಚಿವರಾಗಿ ಹಲವಾರು ಕಾಯ್ದೆ ಮತ್ತು ಕಾನೂನುಗಳನ್ನು ಸಂವಿಧಾನದ ಮೂಲಕ ಜಾರಿಗೊಳಿಸಿದ್ದಾರೆ. ವಿದೇಶದಲ್ಲಿ ಹೆಚ್ಚಿನ ಅಧ್ಯಯನ ಬಳಿಕ ಭಾರತಕ್ಕೆ ಮರಳಿದ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ್ದಾರೆ. ೧೯೨೬ ರಲ್ಲಿ ’ಮೂಕನಾಯಕ’ ಪತ್ರಿಕೆ ಪ್ರಾರಂಭಿಸಿ ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ ಎಂದು ವಿವರಿಸಿದರು.


ವಿದ್ಯಾರ್ಥಿಗಳು ಪ್ರತೀ ನಿತ್ಯ ಕನಿಷ್ಠ ಎರಡು ಗಂಟೆಯಾದರೂ ಮೊಬೈಲ್ ಮತ್ತು ಟಿ.ವಿಯಿಂದ ದೂರವಿದ್ದು, ರಾಷ್ಟ್ರದ ಹಲವು ಮಹನೀಯರ ಪುಸ್ತಕ ಓದುವಂತಾಗಬೇಕು. ತಂದೆ ತಾಯಂದಿರು ತಮ್ಮ ಮಕ್ಕಳ ಬಗ್ಗೆ ಕನಸು ಕಟ್ಟಿಕೊಂಡಿರುತ್ತಾರೆ. ಪಾಲಕರ ಕನಸನ್ನು ನನಸು ಮಾಡುವತ್ತ ವಿದ್ಯಾರ್ಥಿಗಳು ಅಧ್ಯಯನ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.


ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಜೆ.ಜವರಪ್ಪ ಮಾತನಾಡಿ, ಸಮಾಜದ ಎಲ್ಲಾ ವರ್ಗದ ಬಡ ಜನರಿಗೆ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮಾಜದಲ್ಲಿ ಸೌಲಭ್ಯ ಪಡೆಯಲು ಸಾಧ್ಯ ಎಂದು ಹೇಳಿದರು.


ಡಾ.ಬಿ.ಆರ್.ಅಂಬೇಡ್ಕರ್‌ರವರ ಓದು, ಜೀವನ ಮತ್ತು ಬದುಕು ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಎಂ.ಎಸ್.ನೇತ್ರಾವತಿ(ಪ್ರ), ಎ.ಎಸ್.ಜಸ್ಮಿತಾ(ದ್ವಿ), ಎಚ್.ನೇಹಾ ಸತೀಶ್(ತೃ) ವಿದ್ಯಾಥಿನಿಯರಿಗೆ ಡಾ.ಬಿ.ಆರ್.ಅಂಬೇಡ್ಕರ್‌ರವರ ಸಮಗ್ರ ಬರಹಗಳು ಮತ್ತು ಭಾಷಣಗಳು ಪುಸ್ತಕವನ್ನು ಬಹುಮಾನವಾಗಿ ನೀಡಲಾಯಿತು.


ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಸಹಾಯಕ ಪ್ರಾಧ್ಯಪಕರಾದ ಕೋರನ ಸರಸ್ವತಿ, ಕನ್ನಿಕಾ, ಸತೀಶ್, ನಿರ್ಮಲ, ನಮಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಇತರರು ಇದ್ದರು.