ಜಿಲ್ಲೆ

ಹೆಚ್ಚು ಪುಸ್ತಕ ಓದಿ ಜ್ಞಾನಾರ್ಜನೆಗಳಿಸಿ

ರೇಷ್ಮೆ ನಗರ ಡೆಸ್ಕ್

ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಕರೆ | ‘ಹೃದಯದ ಮಾತು ಸತ್ಯ’ ಪುಸ್ತಕದ ಬಿಡುಗ

ರಾಮನಗರ: ಪುಸ್ತಕದ ಓದು ಮನುಷ್ಯನನ್ನು ಸೃಜನಶೀಲರನ್ನಾಗಿ ಮಾಡುತ್ತದೆ. ಇಂದಿನ ಯುವಕರು ಹೆಚ್ಚು ಹೆಚ್ಚು ಸಾಹಿತ್ಯದ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆಗಳಿಸಿ, ಕಂದಾಚಾರ ಮುಕ್ತ ಸಮಾಜದ ವಿಮೋಚನೆಗೆ ಶ್ರಮಿಸಬೇಕಾಗಿದೆ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.

ನಗರದ ಚೈತನ್ಯ ಭವನದಲ್ಲಿ ಬುಧವಾರ ಡಾ. ಸತ್ಯಮೂರ್ತಿ ಗೂಗಿಯವರ ‘ಹೃದಯದ ಮಾತು ಸತ್ಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಸಾಹಿತ್ಯವು ಕೇವಲ ಅಲಂಕಾರಗಳಿಂದ ದೊಡ್ಡಸ್ತಿಕೆಯಿಂದ ದೊಡ್ಡದಾಗುವುದಿಲ್ಲ, ಅದೊಂದು ಮನಸ್ಸಿನ ಸಂವೇದನೆ, ಬದುಕಿನ ಅನುಭವ, ಹೃದಯವಂತಿಕೆಯಿಂದ, ಮನಸ್ಸಿನಿಂದ ಸಾಹಿತ್ಯ ಹೊರಹೊಮ್ಮುವಂತದ್ದು. ಈ ನಿಟ್ಟಿನಲ್ಲಿ ಪ್ರತಿಭೆ ಮನುಷ್ಯನ ಒಳಗಿದ್ದು, ಅದು ಪ್ರಕಟವಾಗುವುದು ಪರಿಶ್ರಮದಿಂದ. ಹಾಗಾಗಿ ಹೆಚ್ಚು ಹೆಚ್ಚು ಸಾಹಿತ್ಯ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು.

ಮನುಷ್ಯನ ಏಳಿಗೆಗೆ ಸಾಹಿತ್ಯಗಳು ಸಹಕಾರಿಯಾಗುವಂತಿದ್ದು, ಶೋಷಣೆ ಮುಕ್ತವಾಗಿರಬೇಕು, ನನ್ನ ಅತ್ಯಂತ ನೆಚ್ಚಿನ ಇಂಗ್ಲಿಷ್ ಪ್ರೊಫೆಸರ್, ಕರಿಯರ ದಮನಿತರ ಹೋರಾಟಗಾರ ಡಾ. ಗೂಗಿ ಅವರ ಹೆಸರನ್ನು ಡಾ. ಸತ್ಯಮೂರ್ತಿಯವರು ಇಟ್ಟುಕೊಂಡಿರುವುದು ಸಂತಸದ ವಿಷಯ ಎಂದರು. ಡಾ. ಸತ್ಯಮೂರ್ತಿ ಅವರು ವಿಚಾರವಂತ ಲೇಖಕರಾಗಿ ಚಿಂತನಶೀಲ ಹಾಗೂ ಸಮ ಸಮಾಜದ ಪ್ರತೀಕವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರ ಸ್ವಾಮಿ, ಜಿಲ್ಲಾ ಜಾಗೃತಿ ದಳದ ಸದಸ್ಯ ಹಾಗೂ ರಾಜ್ಯ ನಾಟಕ ಅಕಾಡೆಮಿ ಸದಸ್ಯ ಕುಂಬಾರಪುರ ಬಾಬು , ರಾಷ್ಟ್ರೀಯ ಅಂಬೇಡ್ಕರ್ ಸೇನೆ ಅಧ್ಯಕ್ಷ ಅರ್ಜುನ್ ಗೋಪಾಲಯ್ಯ, ಭೀಮರಾವ್ ಅಂಬೇಡ್ಕರ್ ವಿಶ್ವಜ್ಞಾನಿ ಸಂಘದ ಗೌರವಾಧ್ಯಕ್ಷ ಸಿ. ಎಲ್ ಶಿವಣ್ಣ ನಾಯಕ್, ಮುಖಂಡರಾದ ರಾಮಕೃಷ್ಣ ಗುಂಡನಗೊಲ್ಲಹಳ್ಳಿ, ಬೆಣಚಕಲ್ಲು ದೊಡ್ಡಿ ಗುಣಶೇಖರ್, ಪುನೀತ್ ಗುಳ್ಳಹಟ್ಟಿ , ಸುನಿಲ್ ನಾಗಪ್ಪ, ಮಹೇಶ್, ಸುದರ್ಶನ್ ಇದ್ದರು.