ಹರಿಹರ: ಬಹುತ್ವದ ಸತ್ಯವನ್ನು ಅರಿಯದಿದ್ದರೆ ಮುಂದೆ ದೇಶಕ್ಕೆ ಗಂಡಾಂತರ ನಿಶ್ಚಿತ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಹೇಳಿದರು.
ನಗರದ ಹೊರವಲಯದ ಮೈತ್ರಿವನ, ಬಿ. ಕೃಷ್ಣಪ್ಪ ಭವನದಲ್ಲಿ ಶನಿವಾರ ಸಂವಿಧಾನ ಓದು ಅಭಿಯಾನ-ಕರ್ನಾಟಕ, ಮಾನವ ಬಂಧುತ್ವ ವೇದಿಕೆ ಹಾಗೂ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್‌ನ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಓದು ಅಭಿಯಾನ ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿಂದು ಏಕಸ್ವಾಮ್ಯ ರೀತಿ ಅಧಿಕಾರ ನಡೆಯುತ್ತಿದ್ದು ಜನಸಮಾನ್ಯರ ಬದುಕು ದುಸ್ಥರವಾಗುತ್ತಿದೆ. ಬಹುತ್ವದಿಂದ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಒಂದು ದೇಶ ಒಂದು ಚುನಾವಣೆ, ಏಕ ನಾಗರಿಕತ್ವ, ಏಕ ನಾಯಕ, ಏಕ ಧರ್ಮ ಎಂಬ ಮನೋಧರ್ಮ ಅಪಾಯಕಾರಿ, ನಿರಂಕುಶ ಪ್ರಭುತ್ವದ ಸಂಕೇತ ಎಂದರು.
4635 ಜಾತಿ, ಉಪಜಾತಿಗಳು, ನೂರಾರು ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ, 6.50 ಲಕ್ಷ ಹಳ್ಳಿಗಳ ಭೌಗೋಳಿಕತೆ ಹೊಂದಿರುವ ಭಾರತದ ಇತಿಹಾಸ ತಿಳಿಯದೆ ಸಂವಿಧಾನ ಅರಿಯಲಾಗಲ್ಲ. ಸಂವಿಧಾನ ಎನ್ನುವುದು ಕಾದಂಬರಿ, ಕವಿತೆ, ಕಾವ್ಯ ಮತ್ತು ಕಥೆಯಲ್ಲ ಅದೊಂದು ಶಿಕ್ಷಣ, ನಾವೆಲ್ಲರೂ ಓದಿ ಆರ್ಥ ಮಾಡಿಕೊಂಡು ಜೀವನ ಸಾಗಿಸಬೇಕಿದೆ ಎಂದು ಹೇಳಿದರು.
ಈ ದೇಶದಲ್ಲಿರುವ ಜಾತಿ ವ್ಯವಸ್ಥೆ, ದಲಿತರು, ಮಹಿಳೆಯರ ಮೇಲಿನ ಶೋಷಣೆ, ಅಸ್ಪಶ್ಯತೆ ಆಚರಣೆ ಹಾಗೂ ಇವರನ್ನು ಶತಮಾನಗಳಿಂದ ಶಿಕ್ಷಣದಿಂದ ದೂರ ಇಟ್ಟಿದ್ದು ಏಕೆಂದು ಸನಾತನ ಧರ್ಮದ ಬಗ್ಗೆ ಮಾತನಾಡುವವರು ಸ್ಪಷ್ಟನೆ ನೀಡಿದರೆ ನಾಳೆಯೆ ನಾನು ಸನಾತನ ಧರ್ಮ ಅಪ್ಪಿಕೊಳ್ಳುತ್ತೇನೆಂದು ಸವಾಲು ಎಸೆದರು.
ಒಂದು ದೇಶ ಒಂದು ಚುನಾವಣೆ, ಇಂಡಿಯಾ ಭಾರತ, ಘರ್ ವಾಪಸಿ, ಲವ್ ಜಿಹಾದ್, ಗೋ ಮಾಂಸ ನಿಷೇಧದಂತಹ ನಿಯಮಗಳ ಬಲವಂತದ ಹೇರಿಕೆ ನಮ್ಮ ದೇಶಕ್ಕೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆ ಎಂಬುದನ್ನು ಪರಿಶೀಲಿಸಬೇಕು. ದೇಶದ ಎಲ್ಲ್ಲ ಸಮಸ್ಯೆಗೆ ಪರಿಹಾರ ನೀಡುವ ಶಕ್ತಿ ಹೊಂದಿರುವ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ನಡೆಯಬಾರದೆಂದರು.
ಹೈಕೋರ್ಟ್ ವಕೀಲ ಅನಂತನಾಯಕ್ ಮಾತನಾಡಿ, ಬಂಧುತ್ವವಿಲ್ಲದ ಪರಿಣಾಮ ಇಂದು ದೇಶದಲ್ಲಿ ಹಿಂದುತ್ವ ರಾರಾಜಿಸುತ್ತಿದೆ. ಸನಾತನ ಧರ್ಮದ ಬಗ್ಗೆ ಚರ್ಚೆ ಮಾಡುವ ಬದಲು ದೇಶದ ಬಡತನ, ಅನಕ್ಷರತೆ, ನಿರುದ್ಯೋಗ, ಅಸ್ಪಶ್ಯತೆಯಂತಹ ಸಾಮಾಜಿಕ ಕಂಟಕಗಳು ನಿವಾರಣೆಗೆ ಆದ್ಯತೆ ನೀಡಬೇಕಿದೆ ಎಂದರು.
ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್‌ನ ರುದ್ರಪ್ಪ ಹನಗವಾಡಿ, ವಕೀಲ ಅನೀಶ್ ಪಾಷಾ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ, ಕಿಗ್ಗಾ ರಾಜಶೇಖರ್ ಎಸ್.ಜಿ., ಬಿ. ರಾಜಶೇಖರ ಮೂರ್ತಿ, ಮಾಡಾಳ್ ಶಿವಕುಮಾರ್, ಮಂಜುನಾಥ ಉಕ್ಕಡಗಾತ್ರಿ ಇದ್ದರು.