ಮೈಸೂರು: ಬೌದ್ಧ ಧರ್ಮದ ಸಾರ ಅರಿಯಲು ಪ್ರತಿಯೊಬ್ಬರು ಬೌದ್ಧ ಸಾಹಿತ್ಯವನ್ನು ಹೆಚ್ಚಾಗಿ ಓದಬೇಕು ಎಂದು ವಿಶ್ವಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣ ಸಿರಿ ಭಂತೇಜಿ ಕರೆ ನೀಡಿದರು.
ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ನಗರದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಉದ್ಘಾನಾ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿ, ಬೌದ್ಧ ಸಾಹಿತ್ಯವನ್ನು ಓದಿ ಬುದ್ಧ ಬೋಧನೆಗಳನ್ನು ಮನನ ಮಾಡಿಕೊಳ್ಳಬೇಕು. ಆ ನಂತರ ಅದನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.
ಮೌಢ್ಯ, ಅಂಧಕಾರ, ಅಜ್ಞಾನ, ದುರಾಸೆ, ದುರ್ವೆಸನಗಳನ್ನು ಹೋಗಲಾಡಿಸಲು ಶಿಬಿರಗಳನ್ನು ಆಯೋಜನೆ ಮಾಡಬೇಕು. ಆ ಮೂಲಕ ಎಲ್ಲರನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯಬೇಕು. ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಇದಕ್ಕೆ ಗ್ರಂಥಾಲಯಗಳು ಸಹಕಾರಿಯಾಗಿದ್ದು, ಗ್ರಂಥಾಲಯಗಳ ಸ್ಥಾಪನೆಗೆ ಹೆಚ್ಚು ಆದ್ಯತೆ ನೀಡಬೇಕು. ಮಕ್ಕಳಲ್ಲಿ ಪ್ರಸ್ತತ ನೈತಿಕ ಮೌಲ್ಯಗಳ ಕೊರತೆ ಉಂಟಾಗುತ್ತಿದೆ. ನೈತಿಕ ಮೌಲ್ಯ ತುಂಬಲು ಗ್ರಂಥಗಳ ಓದು ಸಹಕಾರಿಯಾಗುತ್ತದೆ. ಗುರು, ಹಿರಿಯರನ್ನು ಕಂಡರೆ ಗೌರವಿಸುವ ಪಾಠವನ್ನು ಮಕ್ಕಳಿಗೆ ಕಲಿಸಬೇಕು ಎಂದರು.
ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಚೂಡಾಮಣಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ದೇಶದಲ್ಲಿ ಬೌದ್ಧ ಧರ್ಮವನ್ನು ಪುನಸ್ಥಾಪಿಸಬೇಕು. ಪ್ರೀತಿ, ಮಮತೆ, ಮೈತ್ರಿ ತುಂಬಿರುವ ಬೌದ್ಧ ಧರ್ಮವನ್ನು ನಾವೆಲ್ಲರು ಸ್ವೀಕರಿಸಬೇಕು. ಮಾನವ ಜನಾಂಗವನ್ನು ಸುಸಂಸ್ಕೃತರನ್ನಾಗಿ ಮಾಡಲು ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಅಂಬೇಡ್ಕರ್ ನೀಡಿದ ಎಲ್ಲ ಬಳುವಳಿಯನ್ನು ನಾವು ಪಡೆದಿದ್ದೇವೆ. ಹಾಗಾಗಿ ನಾವು ಅವರು ಸಾಗಿದ ಹಾದಿಯಲ್ಲಿಯೇ ಮುಂದುವರೆಯಬೇಕು ಎಂದು ಕರೆ ನೀಡಿದರು.
ಮಹಾಸಭಾ ರಾಷ್ಟ್ರೀಯ ಸಂಘಟಕ ಮಲ್ಲಿಕಾರ್ಜುನ ಬಾಲ್ಕೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಗೌತಮ ಬುದ್ಧ ಅವರ ತತ್ವ, ಆದರ್ಶಗಳು, ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಈಡೇರಿಸಬೇಕಾದರೆ ಮಹಿಳೆಯರ ಪಾತ್ರ ಅತಿಮುಖ್ಯ. ಹೀಗಾಗಿ ಮಹಿಳೆಯರು ಧಮ್ಮ ಪಾಲನೆಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹಾಸಭಾದ ರಾಜ್ಯಾಧ್ಯಕ್ಷ ಎಸ್.ಸಿದ್ದರಾಜು ಮಾತನಾಡಿ, ಇತಿಹಾಸವನ್ನು ಮರು ಸೃಷ್ಟಿಸುವ ಜವಾಬ್ದಾರಿ ಸಮುದಾಯದ ವಿದ್ಯಾವಂತರು, ಪ್ರಜ್ಞಾವಂತರ ಮೇಲಿದೆ. ಧಮ್ಮವನ್ನು ಎಲ್ಲಡೆ ಪ್ರಸರಿಸಲು ಬೌದ್ಧ ಮಹಾಸಭಾದ ಪದಾಧಿಕಾರಿಗಳು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ದಕ್ಷಿಣ ವಲಯದ ಅಧ್ಯಕ್ಷೆ ಮಂಗಳಾ ದೊಡ್ಡಮನಿ ಮಾತನಾಡಿ, ಬುದ್ಧ ಧಮ್ಮದ ಅನುಸರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವವಾಗಿರುವುದರಿಂದ ರಾಜ್ಯದ ಪ್ರತಿ ಜಿಲ್ಲೆಯೂ ಮಹಿಳಾ ಘಟಕ ರಚಿಸಲಾಗುತ್ತಿದೆ. ಧಮ್ಮ ಪ್ರಸರಣೆಗೆ ಮಹಿಳೆಯರು ಹೆಚ್ಚು ಒಳಗೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಮೇಯರ್ ಪುರುಷೋತ್ತಮ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಬೌದ್ಧ ಧಮ್ಮವನ್ನು ನಾವೆಲ್ಲರು ಅಪ್ಪಿಕೊಳ್ಳಬೇಕು. ಸಮಾಜದಲ್ಲಿ ಭಾತೃತ್ವ, ಮೈತ್ರಿ, ಕರುಣೆಯನ್ನು ಪಸರಿಸಬೇಕು. ಆ ಮೂಲಕ ಸರ್ವಜನಾಂಗದ ಶಾಂತಿ ತೋಟಕ್ಕೆ ನಿರ್ಮಾಣಕ್ಕೆ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಮಹಾಸಭಾ ಉಪಾಧ್ಯಕ್ಷ ಎಂ.ಸಿ.ಶಿವರಾಜ್, ಕಾರ್ಯದರ್ಶಿ ರಘುನಾಥ್, ಖಜಾಂಚಿ ಪುಟ್ಟಮಣಿ, ಸಂಸ್ಕಾರ ವಿಭಾಗದ ಉಪಾಧ್ಯಕ್ಷ ಕ್ಷಮಾ ಹಾಗೂ ಇತರರು ಇದ್ದರು.