ಜಿಲ್ಲೆ

ಇತಿಹಾಸ ತಿಳಿಯಲು ಪುಸ್ತಕಗಳನ್ನು ಓದಿ

ಕಿರಣ್ ಗೌಡ.ಜಿ

ಕೆ.ಆರ್.ಸಾಗರ: ಕೆ.ಆರ್.ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ವತಿಯಿಂದ ಬುಧವಾರ ಚಾರಿತ್ರಿಕ ದಾಖಲೆಗಳ ಮಹತ್ವ ಮತ್ತು ಉಪಯೋಗ ಕುರಿತು ಪತ್ರಾಗಾರ ಕೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಮತ್ತು ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಹಿಂದಿನ ವಿಷಯಗಳು, ನಮ್ಮ ಪೂರ್ವಜರ ಕೆಲಸಗಳನ್ನು ತಿಳಿಯಲು ಪತ್ರಾಗಾರ ಇಲಾಖೆ ಮಹತ್ವದಾಗಿದೆ. ಇತಿಹಾಸಗಳ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳು ನಿರಂತರವಾಗಿ ಓದಬೇಕು, ನಾನು ಕೂಡ ಈಗ ಇತಿಹಾಸದ ಬಗ್ಗೆ ಓದುತ್ತಿದ್ದೇನೆ. ಪತ್ರಾಗಾರ ಇಲಾಖೆಗೆ ನೀವು ಒಮ್ಮೆ ಭೇಟಿ ನೀಡಿ ವಿಷಯ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.

ಶ್ರೀರಂಗಪಟ್ಟಣ ಕೋಟೆಗಳ ಮತ್ತು ಕೆ.ಆರ್.ಸಾಗರ ಅಣೆಕಟ್ಟೆ ನಿರ್ಮಾಣದ ದಾಖಲೆಗಳು ಕೂಡ ಈ ಇಲಾಖೆಯಲ್ಲಿದೆ. ನಮ್ಮ ಜೀವನಾಡಿ ಕಾವೇರಿ ನದಿಗೆ ಅಡ್ಡಲಾಗಿ ಮೈಸೂರು ರಾಜಮಾತೆಯಾಗಿದ್ದ ಕೆಂಪರಾಜಮ್ಮಣಿ ತಮ್ಮ ಅಮೂಲ್ಯವಾದ ಒಡವೆಗಳನ್ನು ಮಾರಿ ಅದರಿಂದ ಬಂದ ಹಣವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಕೊಟ್ಟು ಅಣೆಕಟ್ಟೆ ನಿರ್ಮಿಸಲು ಸಹಕಾರ ನೀಡಿದ್ದರು. ನಾವು ಇಂತಹ ಜಾಗದಲ್ಲಿರುವುದು ನಮ್ಮ ಪುಣ್ಯ ಎಂದರು.

ನಂತರ ಪತ್ರಾಗಾರ ಕೂಟ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ನಂತರ ನಡೆದ ಮೊದಲನೇ ವಿಚಾರಗೋಷ್ಠಿಯಲ್ಲಿ ಮೈಸೂರು ವಿಭಾಗದ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರ ಮಂಜುನಾಥ್, ದಾಖಲೆಗಳ ಸಂರಕ್ಷಣೆ ಮಾಡುವ ವಿಧಾನ, ಅದರ ಮಹತ್ವವನ್ನು ತಿಳಿಸಿಕೊಟ್ಟರು.

ಎರಡನೇ ವಿಚಾರ ಗೋಷ್ಠಿಯಲ್ಲಿ ಲೇಖಕ ಗಣಂಗೂರು ನಂಜೇಗೌಡ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣದ ಬಗ್ಗೆ ಟಿಪ್ಪು ಪಾತ್ರದ ಬಗ್ಗೆ ಹಲವರು ಹೇಳುತ್ತಿದ್ದು, ಅದು ಸತ್ಯವಲ್ಲ ಎಂದರು.

ಪ್ರಾಂಶುಪಾಲೆ ಡಾ.ಶಿಲ್ಪಶ್ರೀ, ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ.ಸುಮಾ, ಸಹಸಂಚಾಲಕ ರವಿಕುಮಾರ್, ಕಾಲೇಜು ಅಧೀಕ್ಷಕಿ ಶ್ರೀವಾಣಿ ಸೇರಿದಂತೆ ಉಪನ್ಯಾಸಕರು, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.