ಬಾಗಲಕೋಟೆ, ಕಾಂಗ್ರೆಸ್ ಗ್ಯಾರಂಟಿ ಯೋಜನೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ, ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯ, ಸಾಮಾಜಿಕ ಜಾಲತಾಣ,
ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸಾಮಾಜಿಕ ಜಾಲತಾಣವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ ಎನ್‌ಎಸ್‌ಯುಐ ಮುಖಂಡರಿಗೆ ಸಲಹೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಎನ್‌ಎಸ್‌ಯುಐ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಯುವಶಕ್ತಿ ಹೆಚ್ಚು ತಂತ್ರಜ್ಞಾನ ಬಳಕೆ ಮಾಡುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣ ಮೂಲಕ ಅವರನ್ನು ತಲುಪಬೇಕು. ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಅನುಷ್ಠಾನದಿಂದ ಎಷ್ಟು ಪ್ರಯೋಜನವಾಗಿದೆ? ಎಷ್ಟು ಯುವಕರು ಈ ಯೋಜನೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಪ್ರಚಾರ ಮಾಡಬೇಕು ಎಂದು ಹೇಳಿದರು.
ಸಂಸದರ ವಿವೇಚನಾ ನಿಧಿಯನ್ನು ಕ್ಷೇತ್ರದ ಸಂಸದರು ಬಳಕೆ ಮಾಡಿಕೊಳ್ಳದ ಕಾರಣ ಕೇಂದ್ರ ಸರ್ಕಾರಕ್ಕೆ ವಾಪಸ್ ಹೋಗಿದೆ. ಪ್ರವಾಸೋದ್ಯಮ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಹಲವು ಯೋಜನೆಗಳಿಗೆ ಸಂಸದರ ವಿವೇಚನಾ ನಿಧಿ ಬಳಕೆ ಮಾಡಿಕೊಳ್ಳಲು ಸಾಧ್ಯವಿತ್ತು. ಆದರೆ ಸಕಾಲದಲ್ಲಿ ಬಳಕೆ ಮಾಡಿಕೊಳ್ಳಲಾಗದ ಕಾರಣ ದೊಡ್ಡ ಮೊತ್ತದ ಅನುದಾನ ವಾಪಸ್ ಹೋಗಿದೆ ಎಂದು ಸಂಯುಕ್ತ ಆರೋಪಿಸಿದರು.
ಹಲವು ವರ್ಷಗಳಿಂದ ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆ ನನೆಗುದಿಗೆ ಬಿದ್ದಿದೆ. ಈ ಯೋಜನೆ ಅನುಷ್ಠಾನಕ್ಕೆ ಬರಲು ಎಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ ಅವರು, ಇಂತಹ ಲೋಪಗಳು ಮತ್ತು ವೈಫಲ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಮತದಾರರಿಗೆ ತಲುಪಿಸುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷವನ್ನು ಯಾವ ಕಾರಣಕ್ಕೆ ಅಧಿಕಾರಕ್ಕೆ ತರಬೇಕು ಎಂಬ ಅಂಶವನ್ನು ನಿಮ್ಮ ನಿಮ್ಮ ಕಾಲೇಜು ಸ್ನೇಹಿತರೊಂದಿಗೆ ಚರ್ಚೆ ಮಾಡಿ, ಗ್ರೂಪ್‌ಗಳಲ್ಲಿ ಹಂಚಿಕೊಳ್ಳಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಏನೇನು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿದೆ ಎಂಬುದನ್ನು ವಿವರಿಸಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ವೈಫಲ್ಯಗಳನ್ನು ತಿಳಿಸುವುದರೊಂದಿಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು, ಗ್ಯಾರಂಟಿಗಳನ್ನು ತಿಳಿಸಿ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದ ಮಾದರಿಯಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಿ ಎಂದರು.ಯುವ ಮುಖಂಡ ಸತ್ಯಜಿತ್ ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುವ ಮೂಲಕ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಅವರಿಗೆ ಬಂಡವಾಳ ಶಾಹಿಗಳ ದೊಡ್ಡ ಮೊತ್ತದ ಸಾಲ ಮನ್ನಾ ಮಾಡಲು ಸಾಧ್ಯವಿದೆ. ಆದರೆ ರೈತರ ಸಮಸ್ಯೆಗೆ ಸ್ಪಂದಿಸುವ ಮಾನವೀಯತೆ ಇಲ್ಲವಾಗಿದೆ. ಕೇಂದ್ರ ಸ್ಪಂದಿಸದಿದ್ದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಬಂದಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಎನ್‌ಎಸ್ ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ ತಿಪ್ಪಾರೆಡ್ಡಿ, ಸಚಿನ್ ಅಂಬಿ, ಶಂಭು ಪಡಸಾಲಿ, ಸೋಮು ಮೇಟಿ ಮತ್ತಿತರರು ಉಪಸ್ಥಿತರಿದ್ದರು.