ಜಿಲ್ಲೆ

ಮೃಗಾಲಯದಲ್ಲಿರುವ ಮತ್ಸ್ಯಾಲಯ ಪೂರ್ಣಕ್ಕೆ ಮರು ಟೆಂಡರ್; ಈಶ್ವರ ಬಿ. ಖಂಡ್ರೆ

ಮೈಸೂರು: ಕಾರಂಜಿ ಕೆರೆ ಆವರಣದಲ್ಲಿ ಅಪೂರ್ಣವಾಗಿರುವ ಮತ್ಸ್ಯಾಲಯ ನಿರ್ಮಾಣಕ್ಕೆ ಮರು ಟೆಂಡರ್ ಕರೆಯಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.


ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಸಂದರ್ಶಕರ ಅನುಕೂಲಕ್ಕಾಗಿ ತೆರೆದಿರುವ ಲಗೇಜು ಕೊಠಡಿ ಮತ್ತು ಹುಲಿ ಮನೆಯ ವೀಕ್ಷಣಾ ಗ್ಯಾಲರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.


ಕಾರಂಜಿ ಕೆರೆ ಆವರಣದಲ್ಲಿ ಆರಂಭಿಸಲು ಉದ್ದೇಶಿಸಿರುವ ಸಮುದ್ರ ಮತ್ತು ಸಿಹಿನೀರು ಮೀನುಗಳ ಮತ್ಸ್ಯಾಗಾರ ನಿರ್ಮಿಸಲು ಯೋಜಿಸಲಾಗಿದ್ದು, ಇದಕ್ಕೆ ಕಳೆದ ಜನವರಿಯಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ, ಒಬ್ಬ ಗುತ್ತಿಗೆದಾರರು ಮಾತ್ರವೇ ಟೆಂಡರ್ ಸಲ್ಲಿಸಿದ್ದ ಕಾರಣ ಈ ಟೆಂಡರ್ ರದ್ದು ಮಾಡಿ, ಹೊಸದಾಗಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಲೋಕಸಭಾ ಚುನಾವಣಾಯಿಂದ ವಿಳಂಬವಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.


ದೂರದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ 80 ಎಕರೆಯಷ್ಟು ವಿಶಾಲವಾದ ಮೃಗಾಲಯ ಆವರಣದಲ್ಲಿ ವನ್ಯಮೃಗ, ಪಕ್ಷಿಗಳನ್ನು ವೀಕ್ಷಿಸಲು ವರ್ಧಿತ ಸೇವೆ ನೀಡಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದರು.


ಮೈಸೂರು ಮೃಗಾಲಯ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಝೂಗಳಲ್ಲಿ ಒಂದಾಗಿದೆ ಎಂಬುದು ಹೆಮ್ಮೆಯ ಸಂಗತಿ. ಪ್ರತಿ 4 ವರ್ಷಕ್ಕೊಮ್ಮೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ನಡೆಸುವ ಸಾಮರ್ಥ್ಯ ನಿರ್ವಹಣಾ ಮೌಲ್ಯೀಕರಣದ ಪ್ರಕಾರ ಭಾರತದ ಮೃಗಾಲಯಗಳ ಶ್ರೇಣೀಕರಣದಲ್ಲಿ ಮೈಸೂರು ಮೃಗಾಲಯ 2ನೇ ಸ್ಥಾನದಲ್ಲಿದೆ. ಚೆನ್ನೈ ಮೃಗಾಲಯ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಲಗೇಜು ಕೊಠಡಿ:


ಮೃಗಾಲಯಕ್ಕೆ ತಮ್ಮ ಲಗೇಜು ಹೊತ್ತು ಪ್ರವಾಸಿಗರು ಮತ್ತು ಸಂದರ್ಶಕರು ಕಷ್ಟಪಡುತ್ತಾರೆ. ಜತೆಗೆ ಲಗ್ಗೇಜುಗಳಲ್ಲಿ ಸ್ಫೋಟಕ ಇತ್ಯಾದಿಯನ್ನು ತಪಾಸಣೆ ಮಾಡುವುದೂ ಸಿಬ್ಬಂದಿಗೂ ಕಷ್ಟವಾಗುತ್ತಿತ್ತು. ಹೀಗಾಗಿ ವಾಹನ ಪಾಕಿರ್ಂಗ್ ಸ್ಥಳದಲ್ಲಿ ಲಗ್ಗೇಜು ಕೊಠಡಿ ಮಾಡಲಾಗಿದ್ದು, ಇಲ್ಲಿ ಸ್ಕ್ಯಾನರ್ ಅಳವಡಿಸಿ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹುಲಿ ವೀಕ್ಷಣಾ ಗ್ಯಾಲರಿ:
ಹುಲಿಗಳನ್ನು ವೀಕ್ಷಿಸಲು ಸಂದರ್ಶಕರಿಗೆ ಅನುಕೂಲವಾಗುವಂತೆ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗಿದೆ. ಇಲ್ಲಿ ಎತ್ತರದ ದಿಬ್ಬ ನಿರ್ಮಿಸಲಾಗಿದ್ದು, ಗಾಜಿನೊಳಗಿಂದ ಸಂದರ್ಶಕರು ವೀಕ್ಷಿಸಬಹುದು ಎಂದೂ ವಿವರಿಸಿದರು.


ಕೂರ್ಗಳ್ಳಿಯಲ್ಲಿ ವನ್ಯಮೃಗ ರಕ್ಷಣಾ ಕೇಂದ್ರ:


ನಗರದ ಹೊರವಲಯ ಕೂರ್ಗಳ್ಳಿಯಲ್ಲಿ 4 ವನ್ಯಜೀವಿ ರಕ್ಷಣಾ ವಿಭಾಗಗಳಿದ್ದು, ಇತ್ತೀಚಿಗೆ ಮತ್ತೆ 2 ವಿಭಾಗಕ್ಕೆ ಅನುಮೋದನೆ ನೀಡಲಾಗಿದೆ. ಗಾಯಗೊಂಡ ಅಥವಾ ಗ್ರಾಮಕ್ಕೆ ನುಗ್ಗಿ ಮಾನವ ವನ್ಯಜೀವಿ ಸಂಘರ್ಷಕ್ಕೆ ಕಾರಣವಾದ ಸೆರೆ ಹಿಡಿದ 8 ಹುಲಿ ಅಥವಾ ಚಿರತೆಗಳನ್ನು ಇಲ್ಲಿ ಸಂರಕ್ಷಿಸಬಹುದು ಎಂದು ತಿಳಿಸಿದರು.


ಆನೆಗಳ ಈಜುಕೊಳ


ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಗಳನ್ನು ಪೋಷಿಸಲು ಕೂರ್ಗಳ್ಳಿಯಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ 2 ಆನೆ ಮರಿ ಮತ್ತು 3 ದೊಡ್ಡ ಆನೆಗಳಿದ್ದು, ಇವುಗಳಿಗಾಗಿಯೇ ವಿಶೇಷವಾಗಿ ಈಜುಕೊಳ ವಿನ್ಯಾಸಗೊಳಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.