ಮೈಸೂರು: ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲ ರೈತ ಸಂಘಟನೆಗಳು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ದುಂಡು ಮೇಜಿನ ಸಭೆ ನಡೆಸುವುದು ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ (ರೈತ ಪರ್ವ)ದಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಮೂರನೇ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ರೈತರು ಈಗ ಬೆಳೆ ಮತ್ತು ಬೆಲೆ ಬಿಟ್ಟರೆ ಏನನ್ನೂ ಕೇಳುತ್ತಿಲ್ಲ. ಇದರಿಂದಾಗಿ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಮೊದಲೆಲ್ಲ ರೈತ ಸಂಘ, ದಲಿತ ಸಂಘರ್ಷ ಸಮಿತಿ ಎಂದರೆ ಎಲ್ಲರೂ ಹೆದರುತ್ತಿದ್ದರು. ವಿದ್ಯಾರ್ಥಿ ಸಂಘಟನೆಗಳು ಜೋರಾಗಿದ್ದವು. ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ ಇತರ ರೈತ ನಾಯಕರ ಮಾತಿಗೆ ಬೆಲೆ ಇತ್ತು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಸಂಘಟನೆಗಳು ಒಡೆದು ಚೂರಾಗಿರುವುದು ಇದಕ್ಕೆ ಕಾರಣ ಎಂದು ವಿಷಾದಿಸಿದರು.
ಹಾಗಾಗಿ, ರೈತರು ಸಮಸ್ಯೆಗಳಿಂದ ಬಳಲುತ್ತಿದ್ದು, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಎಲ್ಲ ರೈತ ಸಂಘಟನೆಗಳು ಒಂದಾಗಿ ಒಂದೆಡೆ ಕುಳಿತು ಚರ್ಚಿಸಬೇಕಿದೆ. ಸಭೆ ನಡೆಸಲು ಸ್ಥಳ, ಸಂಬಂಧಪಟ್ಟ ಮಂತ್ರಿಗಳನ್ನು ಕರೆಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಹಸಿರುಶಾಲು ಎಂದರೆ ಹಸಿದವನಿಗೆ ಅನ್ನ ನೀಡುವವನು ಎಂದರ್ಥ. ಹೀಗಾಗಿ ರೈತ, ದಲಿತ, ವಿದ್ಯಾರ್ಥಿ ಸಂಘಟನೆಗಳ ಆ ಕಾಲ ಮತ್ತೆ ಬರಬೇಕು. ಈ ಸಂಘಟನೆಗಳು ಮರು ಸಂಘಟನೆ ಆಗುವುದು ಬದುಕಿಗೆ ಅನಿವಾರ್ಯ ಎಂದರು.
ಅಧಿಕಾರಿಗಳು ಒಂದಷ್ಟು ಲೂಟಿ ಹೊಡೆದು ರಾಜಕಾರಣಿಗಳಿಗೆ ನೀಡುತ್ತಿರುವುದರಿಂದ ರಾಜಕಾರಣಿಗಳು ಅಧಿಕಾರಿಗಳ ಗುಲಾಮರಂತಾಗಿದ್ದಾರೆ. ರಾಜಕಾರಣಿಗಳು ವೋಟು-ನೋಟು ಎಂದು ಓಡಾಡುತ್ತಿದ್ದಾರೆ. ಆಳುವ ಸರ್ಕಾರ ತಪ್ಪು ಮಾಡಿದಾಗ ಪ್ರಶ್ನಿಸಬೇಕಾದ ಪ್ರತಿಪಕ್ಷಗಳು ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿವೆ ಎಂದು ಕಿಡಿಕಾರಿದರು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ ಜನರಿಗೆ ನೆರವಾದರು. ಎರಡನೇ ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿ ಜೈ ಜವಾನ್, ಜೈ ಕಿಸಾನ್ ಎಂದು ರೈತರು ಹಾಗೂ ಸೈನಿಕರ ಮಹತ್ವ ಸಾರಿದರು. ಡಿ. ದೇವರಾಜ ಅರಸರು ಭೂಸುಧಾರಣೆ ಕಾನೂನು ಜಾರಿಗೆ ತಂದರು. ಆದರೆ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಅರಸರನ್ನೇ ನಾವು ಮರೆತುಬಿಟ್ಟಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಪರ್ವ ಸಂಸ್ಥಾಪಕ ಅಧ್ಯಕ್ಷ ಟಿ.ವಿ.ಅರುಣ್ ಕುಮಾರ್ ಮಾತನಾಡಿ, ರೈತರನ್ನು ಅಧಿಕಾರಿಗಳು, ದಲ್ಲಾಳಿಗಳಿಂದ ಕಾಪಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ದರ ನಿಗದಿ ಮಾಡಬೇಕು. ಸಹಾಯಧನ ದುರುಪಯೋಗ ತಪ್ಪಿಸಬೇಕು. ರೈತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಾದರೆ ರೈತರು ಒಗ್ಗೂಡಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಬೆಂಗಳೂರಿನ ಉದ್ಯಮಿ ವಿಶ್ವನಾಥ್, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ್, ಎಪಿಎಂಸಿ ದಲ್ಲಾಳಿ ಸಂಘದ ಅಧ್ಯಕ್ಷ ಮಿಲಿಟರಿ ಮಹದೇವಪ್ಪ, ರೈತ ಪರ್ವ ರಾಜ್ಯ ಗೌರವಾಧ್ಯಕ್ಷ ಜೆ.ಎಂ. ಕುಮಾರ್, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಅಧ್ಯಕ್ಷ ಶಿವಣ್ಣ ಇತರರು ಇದ್ದರು.