ಚಿಕ್ಕಮಗಳೂರು: ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಇಂದು ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ಮಾತನಾಡಿ, ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಹಾರಾಡುತ್ತಿದ್ದ ಹನುಮ ಧ್ವಜವನ್ನು ನವೀಕರಣ ಮಾಡಿ ಆಸ್ತಿಕ ಗ್ರಾಮಸ್ಥರು ಸೇರಿ ಹೂಸ ಅರ್ಜುನ ಸ್ಥಂಭದಲ್ಲಿ ಏರಿಸಿದ ಹನುಮ ಧ್ವಜವನ್ನು ಸರ್ಕಾರ ಕೆಳಗೆ ಇಳಿಸಿದೆ. ಈ ಘಟನೆ ರಾಜ್ಯದ ಎಲ್ಲ ಹಿಂದುಗಳ ಮನಸ್ಸಿಗೆ ನೋವುಂಟುಮಾಡಿದೆ. ಈ ಘಟನೆಯನ್ನು ಹಿಂದೂ ಸಮಾಜ ಖಂಡಿಸುತ್ತದೆ. ನಮ್ಮ ದೇಶ ಜಾತ್ಯಾತೀತ ಮಾತ್ರವಾಗಿದ್ದು ಧರ್ಮಾತೀತವಲ್ಲ ಎಂದು ತಿಳಿಸಿದ್ದಾರೆ.
40 ವರ್ಷಗಳಿಂದ ಭಜನೆ ಮಾಡುತ್ತಾ ಯಾವ ತೊಂದರೆ ಮಾಡದೇ ಶ್ರೀರಾಮ ಭಜನಾ ಮಂಡಳಿಯವರು ಹಾರಿಸಿದ ಧ್ವಜದ ಸ್ತಂಭ ಶಿಥಿಲಗೊಂಡ ಕಾರಣಕ್ಕೆ ಕೆರೆಗೋಡು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಶ್ರೀರಾಮ ಭಜನಾ ಮಂಡಳಿ ಮತ್ತಿತರರ ಅರ್ಜಿ ಮೇರೆಗೆ ಉತ್ತಮ ಧ್ವಜ ಸ್ತಂಭ ಸ್ಥಾಪಿಸಿ ಅದರಲ್ಲಿ ಹಾರಿಸಿದ ಹನುಮ ಧ್ವಜವನ್ನು ಸರ್ಕಾರಿ ಅಧಿಕಾರಿಗಳು ಇಳಿಸಿದ ಧ್ವಜವನ್ನು ಮತ್ತೆ ಏರಿಸಬೇಕು ಎಂದು ಆಗ್ರಹಿಸಿದ್ದಾರೆ.