ಬಂಟ್ವಾಳ: ಎರಡು ದಿನಗಳ ಹಿಂದೆ ಕುಸಿದು ಬಿದ್ದಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಮರು ನಿರ್ಮಾಣಕ್ಕೆ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಹೇಳಿದರು.
ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಶೀಘ್ರವೇ ತಜ್ಞರ ಸಲಹೆ ಪಡೆಯಲಾಗುವುದು ಎಂದರು.
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ದೇವಸ್ಥಾನದ ತಡೆಗೋಡೆಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಇದು ದೇವಸ್ಥಾನಕ್ಕೂ ಅಪಾಯ ಎದುರಾಗಬಹುದು ಎಂದು ಗ್ರಾಮಸ್ಥರು ಶಾಸಕರ ಮುಂದೆ ಅಳಲು ತೋಡಿಕೊಂಡರು. ಪ್ರತಿಕ್ರಿಯಿಸಿದ ಶಾಸಕರು, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಹದಿನೈದು ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಆಡಳಿತಾಧಿಕಾರಿ ನೋಣಯ್ಯ ನಾಯ್ಕ, ಗ್ರಾಮಸ್ಥರಾದ ಗಣಪತಿ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು, ಅರ್ಚಕರಾದ ಜಯಶಂಕರ ಉಪಾಧ್ಯಾಯ, ಮಿಥುನ್ ರಾಜ್ ನಾವಡ, ಪ್ರಮುಖರಾದ ಮೋಹನ ಆಚಾರ್ಯ, ಚಿದಾನಂದ ರೈ, ಕೆ.ರಾಜಗೋಪಾಲ ನಾಯಕ್, ಸದಾಶಿವ ಪ್ರಭು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಪ್ರವೀಣ ಪೂಜಾರಿ, ಸೂರ್ಯಹಾಸ ಆಚಾರ್ಯ, ರಾಮಕೃಷ್ಣ ಮಯ್ಯ, ರಾಧಾಕೃಷ್ಣ ಮಯ್ಯ, ಚಂದ್ರಶೇಖರ ಶೆಟ್ಟಿ, ಕ್ಷೇತ್ರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಶ ಶೆಟ್ಟಿ, ಡೊಂಬಯ್ಯ ಅರಳ ಮತ್ತು ಸಿಬಂದಿ ಉಪಸ್ಥಿತರಿದ್ದರು.