ಶಿರಸಿ: ನಗರದ ಗೋಪಾಲಕೃಷ್ಣ ದೇವಸ್ಥಾನಕ್ಕೆ 140 ವರ್ಷಗಳ ಇತಿಹಾಸಿದ್ದು, ನವೀಕರಣ ಮಾಡಿ ಮರು ಪ್ರತಿಷ್ಠಾ ಮಹೋತ್ಸವ ಆಚರಿಸುತ್ತಿರುವುದು ಶಿರಸಿ ಪೇಟೆಗೆ ನೀಡುತ್ತಿರುವ ಮಹತ್ತರ ಕೊಡುಗೆಯಾಗಿದೆ. ಇದು ಶ್ರೀ ಕೃಷ್ಣ ಪರಮಾತ್ಮನ ಪ್ರೇರಣೆ ಹಾಗೂ ಆಶೀರ್ವಾದದ ಪ್ರತೀಕವಾಗಿದೆ. ಬರುವ ದಿನಗಳಲ್ಲಿ ಇದೊಂದು ಧಾರ್ವಿುಕ ಹಾಗೂ ಆಧ್ಯಾತ್ಮಿಕ ಕೇಂದ್ರವಾಗಲಿದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮಿಗಳು ಹೇಳಿದರು.
ಆರು ದಿನಗಳ ಕಾಲ ನಡೆಯುವ ನಗರದ ರಾಯರಪೇಟೆ ಶ್ರೀ ಗೋಪಾಕೃಷ್ಣ ದೇವರ ಮರು ಪ್ರತಿಷ್ಠಾ ಮಹೋತ್ಸವದಲ್ಲಿ ಸಾನ್ನಿಧ್ಯ ನೀಡಲು ಶುಕ್ರವಾರ ಶಿರಸಿಗೆ ಆಗಮಿಸಿ ಸ್ವಾಗತ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶಿರಸಿಗೂ ಪರ್ತಗಾಳಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. 18ನೇ ಶತಮಾನದಲ್ಲಿ ಮಠ ಪರಂಪರೆಯ 18ನೇ ಯತಿಗಳಾಗಿದ್ದ ಶ್ರೀಮದ್ ಪೂರ್ಣಪ್ರಜ್ಞ ತೀರ್ಥರು ಕಾಶಿಕ್ಷೇತ್ರದಲ್ಲಿರುವ ಶ್ರೀಮಠದ ಶ್ರೀ ಬಿಂದುಮಾಧವ ದೇವಸ್ಥಾನದಲ್ಲಿ ನಿತ್ಯ ಬ್ರಾಹ್ಮಣ ಭೋಜನದ ವ್ಯವಸ್ಥೆ ಮಾಡಲು ಕಾಶೀರಾಜನಿಗೆ ಅಂದಿನ ಕಾಲದಲ್ಲಿ ಮಠದ ವತಿಯಿಂದ 6 ಸಾವಿರ ರೂ. ನೀಡಿದ್ದರು. ಆದರೆ, ಆ ಪ್ರಕ್ರಿಯೆ ಒಂದೆರಡು ವರ್ಷ ಮಾತ್ರ ನಡೆದು ಆನಂತರ ಸ್ಥಗಿತಗೊಂಡಿತ್ತು. ಅದನ್ನು ಪುನರಾವರ್ತಿಸಲು ಅನಂತರದ ಶ್ರೀಗಳಾದ ಪದ್ಮನಾಭ ತೀರ್ಥರು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ತದನಂತರದಲ್ಲಿ 20ನೇ ಯತಿವರ್ಯರಾದ ಶ್ರೀಮದ್ ಇಂದಿರಾಕಾಂತ ತೀರ್ಥರು ಈ ದೇವಸ್ಥಾನಕ್ಕೆ ಭೇಟ್ಟಿ ನೀಡಿದ್ದ ಸಂದರ್ಭದಲ್ಲಿ ಶಿರಸಿಯ ಖ್ಯಾತ ನ್ಯಾಯವಾದಿ ಇದೇ ಪೇಟೆಯ ರಾವಬಹಾದ್ದೂರ ಪುಂಡಲೀಕ ನಾರಾಯಣ ಪಂಡಿತರಿಗೆ ಅಪ್ಪಣೆ ಕೊಡಿಸಿದ ಪ್ರಕಾರ ಅವರು ಕಾಶಿಗೆ ಹೋಗಿ ಅಲ್ಲಿನ ರಾಜಪರಿವಾರದೊಂದಿಗೆ ವಾದ ಮಂಡಿಸಿ ಆ ಹಣವನ್ನು ಪುನಃ ಮಠಕ್ಕೆ ಮರಳಿ ಸಿಗುವಂತೆ ಮಾಡಿದ್ದರು ಎಂದು ನೆನಪಿಸಿದರು. ’ಆದ್ದರಿಂದ ಈ ಆವಾರದಲ್ಲಿ ಇಂದು ತಾವು ಉದ್ಘಾಟನೆಗೈದ ಇಂದಿರಾಕಾಂತ ಸಭಾಗೃಹ ಔಚಿತ್ಯ ಪೂರ್ಣವಾಗಿದೆ’ ಎಂದರು.
ಶ್ರೀಗಳನ್ನು ಅಲಂಕರಿಸಿದ ರಥದಲ್ಲಿ ಕೂಡಿಸಿ ಶಿರಸಿ ಅರ್ಬನ್ ಬ್ಯಾಂಕ್ ವೃತ್ತದಿಂದ ದೇವಸ್ಥಾನದವರೆಗೆ ನೂರಾರು ಸಮಾಜ ಬಾಂಧವರು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು. ರಸ್ತೆಯದ್ದಕ್ಕೂ ದೀಪಾಲಂಕಾರ ಮಾಡಿ ರಂಗೋಲಿ ಹಾಗೂ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
ವೈದಿಕರ ವೇದಘೊಷದ ಮೂಲಕ ಆರಂಭಗೊಂಡ ಈ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಪ್ರಭು ಹಾಗೂ ಸಂಗಡಿಗರು ದಿ. ವೇ. ಮೂ. ವಿಠ್ಠಲಾಚಾರ್ಯರು ರಚಿಸಿದ್ದ ಸ್ವಾಗತ ಗೀತೆಯನ್ನು ಹಾಡಿದರು. ದೇವಸ್ಥಾನ ಸಮಿತಿ ಸದಸ್ಯ ಹರೀಶ ಪಂಡಿತ ಅವರು ಸ್ವಾಗತಿಸಿದರು. ಮರು ನಿರ್ಮಾಣ ಸಮಿತಿ ಅಧ್ಯಕ್ಷ ವರೀಂದ್ರ ಕಾಮತರು ಪ್ರಾಸ್ತಾವಿಕ ಮಾತನಾಡಿ, ಕಳೆದ 8 ವರ್ಷಗಳ ಹಿಂದೆ ನಮ್ಮ ಸಮಿತಿ ಕೈಗೊಂಡ ದೇವಾಲಯ ಮರು ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿತ್ತು. ಆದರೆ, 2023ರಲ್ಲಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನಮ್ಮ ದೇವಸ್ಥಾನಕ್ಕೆ ಆಗಮಿಸಿದಾಗ 2024ನೇ ಇಸವಿಯಲ್ಲಿ ಈ ಕಾರ್ಯ ಸಂಪೂರ್ಣವಾಗಿ ಉದ್ಘಾಟನೆಯಾಗುವಂತೆ ಹರಸಿ ಆಶೀರ್ವದಿಸಿದ್ದರು. ಅವರ ಸಂಕಲ್ಪದ ಫಲವಾಗಿ ಮುಂದಿನ ಕಾರ್ಯಗಳೆಲ್ಲ ಸುಲಲಿತವಾಗಿ ನಡೆದು ಈಗ ನಾವು ಮರು ಪ್ರತಿಷ್ಠಾ ಕಾರ್ಯ ನಡೆಸಲು ಸಾಧ್ಯವಾದ ಬಗ್ಗೆ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿದರು. ದೇವಳದ ಪ್ರಧಾನ ಅರ್ಚಕ ವೇ.ಮೂ. ಶ್ರೀಚರಣ ಆಚಾರ್ಯ, ಡಾ. ವಿಟ್ಠಲ್ ಭಟ್ಟ ಇತರರಿದ್ದರು. ಡಿ. 15ರಂದು ಶ್ರೀ ಗೋಪಾಲಕೃಷ್ಣ ದೇವರ ಮರು ಪ್ರತಿಷ್ಠಾಪನಾ ಮಹೋತ್ಸವ ಪರ್ತಗಾಳೀ ಮಠಾಧೀಶರ ದಿವ್ಯ ಹಸ್ತದಿಂದ ನೆರವೇರಲಿದೆ.