ರಾಯಚೂರು ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷರನ್ನಾಗಿ ರಾಜಶೇಖರ ರಾಮಸ್ವಾಮಿಯನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ. 
ಜಿಲ್ಲೆ

ರಾಜಶೇಖರಗೆ ಒಲಿದ ಆರ್‌ಡಿಎ ಅಧ್ಯಕ್ಷ ಸ್ಥಾನ

ರಾಚಯ್ಯ ಸ್ವಾಮಿ

ರಾಯಚೂರು: ರಾಜ್ಯ ಸರ್ಕಾರ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಕೆಲವು ಬದಲಾವಣೆಗೆ ಮಾಡಿ ಬುಧವಾರ ಮರು ಆದೇಶ ಹೊರಡಿಸಿದೆ. ಕರ್ನಾಟಕ ಜೈವಿಕ ಇಂಧನ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲೆಯ ರಾಜಶೇಖರ ರಾಮಸ್ವಾಮಿಯನ್ನು ರಾಯಚೂರು ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮರು ಆದೇಶ ಹೊರಡಿಸಲಾಗಿದೆ.
ಕಳೆದ ಒಂಭತ್ತು ತಿಂಗಳಿಂದ ಖಾಲಿಯಿದ್ದ ಆರ್‌ಡಿಎ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಕೆ.ಸಿ.ಅಯ್ಯಣ್ಣ ಮತ್ತು ರುದ್ರಪ್ಪ ಅಂಗಡಿ ತೀವ್ರ ಪ್ರಯತ್ನ ನಡೆಸಿದ್ದರು. ಕಾಂಗ್ರೆಸ್‌ನಲ್ಲಿರುವ ಬಣ ರಾಜಕೀಯದಿಂದ ಆರ್‌ಡಿಎ ಅಧ್ಯಕ್ಷರ ನೇಮಕ ನನೆಗುದಿಗೆ ಬಿದ್ದಿತ್ತು.
ಸಚಿವ ಎನ್.ಎಸ್.ಬೋಸರಾಜು ತಮ್ಮ ಆಪ್ತ ರುದ್ರಪ್ಪ ಅಂಗಡಿಯನ್ನು ಅಧ್ಯಕ್ಷರನ್ನಾಗಿ ಮಾಡಲು ತೀವ್ರ ಪ್ರಯತ್ನ ನಡೆಸಿದ್ದರು. ಮತ್ತೊಂದೆಡೆ ಬೋಸರಾಜು ವಿರೋ ಬಣ ಅದಕ್ಕೆ ಪಕ್ಷದ ವರಿಷ್ಠರ ಮುಂದೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನೇಮಕಕ್ಕೆ ಒಮ್ಮತ ಮೂಡದಂತಾಗಿತ್ತು.
ಎರಡು ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಯ್ಯಗೆ ಆಪ್ತರಾಗಿರುವ ಕೆ.ಸಿ.ಅಯ್ಯಣ್ಣ ಹೆಸರು ಅಂತಿಮಗೊಂಡಿದ್ದು, ಜಿಲ್ಲಾ ಪೊಲೀಸರಿಗೆ ಅವರ ಮಾಹಿತಿ ಕೇಳಿ ಸರ್ಕಾರದಿಂದ ಪತ್ರ ಕೂಡಾ ಬರೆಯಲಾಗಿತ್ತು. ಆದರೆ ಈಗ ಎರಡು ಬಣದವರು ಬೇಡ ಎನ್ನುವ ಕಾರಣಕ್ಕೆ ಹೈಕಮಾಂಡ್ ರಾಜಶೇಖರ ರಾಮಸ್ವಾಮಿಯನ್ನು ನೇಮಕ ಮಾಡಿದೆ ಎಂದು ಹೇಳಲಾಗುತ್ತಿದೆ.
ಪಕ್ಷದಲ್ಲಿನ ಬಣ ರಾಜಕೀಯದಿಂದ ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆಯೂ ನಡೆಯದಂತಾಗಿದ್ದು, ಆರ್‌ಡಿಎ ಅಧ್ಯಕ್ಷ ಸ್ಥಾನಕ್ಕೂ ತಿಕ್ಕಾಟ ನಡೆದಿದ್ದವು. ಅಂತಿಮವಾಗಿ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಾಜಶೇಖರ ರಾಮಸ್ವಾಮಿ ನೇಮಕ ಮೂಲಕ ಎರಡು ಬಣಗಳನ್ನು ಸಮಾಧಾನ ಪಡಿಸುವ ಕೆಲಸ ಮಾಡಿದೆ.