ಲಿಂಗಸುಗೂರು ತಾಲೂಕಿನ ಹುಲಿಗುಡ್ಡದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಅಕ್ರಮವಾಗಿ 9 ನಿವೇಶನ ಅನುಮೋದನೆ ಪ್ರಕರಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಸೇರಿ ಮೂವರು ಅಧಿಕಾರಿಗಳ ತಲೆದಂಡ ಪ್ರಕರಣದ ನಂತರ ಈ ಸರದಿಯಲ್ಲಿ ಯೋಜನಾ ನಿರ್ದೇಶಕರು ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ ಬಿರಾದರ್ ಹೆಸರು ಕೇಳಿ ಬಂದಿದೆ.
ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ನಿವೇಶನ ಮತ್ತು ಉದ್ಯಾನವನಗಳನ್ನು ಅಕ್ರಮವಾಗಿ ನಿವೇಶನಗಳನ್ನಾಗಿ ಪರಿವರ್ತಿಸಿ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಈರಣ್ಣ ಬಿರಾದರ್ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಅವಧಿಯಲ್ಲಿ ಪರವಾನಿಗೆ ನೀಡುವುದರ ಜತೆಗೆ ನಕಲಿ ದಾಖಲಿ ಸೃಷ್ಟಿಸಿ ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳವನ್ನು ನಿವೇಶನವನ್ನಾಗಿಸಿದ ಪ್ರಕರಣದಲ್ಲಿ ಮೂರು ಜನ ಅಧಿಕಾರಿಗಳು ಅಮಾನತ್ತುಗೊಂಡ ಕೆಲವೇ ದಿನಗಳಲ್ಲಿ ಈರಣ್ಣ ಬಿರಾದರ್ ಪ್ರಕರಣ ಬಹಿರಂಗಗೊಂಡಿದೆ.
ಏನಿದು ಅಕ್ರಮ?
ಈರಣ್ಣ ಬಿರಾದರವರು 2011 ರಿಂದ 2014ರ ಅವಧಿಗೆ ಲಿಂಗಸುಗೂರು ಪುರಸಭೆ ಮುಖ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಸರ್ಕಾರಿ ಉದ್ಯಾನವನ ಮತ್ತು ಸಾರ್ವಜನಿಕ ನಿವೇಶನಗಳಿಗೆ ಖಾಸಗಿ ವ್ಯಕ್ತಿಗಳಿಗೆ ಸ್ಥಳ ಮಾರಾಟ ಮಾಡಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ್ದಾರೆ. ತಾಲೂಕಿನ ಗುಡದನಾಳ ರಸ್ತೆಯ ಸರ್ವೇ ನಂ 193/1 , 6 ಎಕರೆ 32 ಗುಂಟೆ ಜಮೀನು ಭೂ ಪರಿವರ್ತನೆ ಮಾಡಿ ನಿವೇಶನ ಮಾಡಲಾಗಿದೆ. ಅದರಲ್ಲಿ ಬರುವ ಉದ್ಯಾನವನದ ಸ್ಥಳಕ್ಕೆ ಪರವಾನಿಗೆ ನೀಡಲಾಗಿದೆ. ಹುಲಿಗುಡ್ಡ ಗ್ರಾಮದಲ್ಲಿ ಸರ್ವೇ ನಂ 7/1 ರಲ್ಲಿ 5 ಎಕರೆ 13 ಗುಂಟೆ ಉದ್ಯಾನವನದ ಜಮೀನಿನಲ್ಲಿ ನಾಗವೇಣಿ ಎಂಬ ಮಹಿಳೆಗೆ ಕಟ್ಟಡ ಕಟ್ಟಲು ಪರವಾನಿಗೆ ಬಿರಾದರ ಅವಧಿಯಲ್ಲಿ ನೀಡಲಾಗಿದೆ.
ಈ ಲೇಔಟ್ನಲ್ಲಿ ನಾಲ್ಕು ಉದ್ಯಾನ ಸ್ಥಳಗಳನ್ನು ಖಾಸಗಿ ವ್ಯಕ್ತಿಗಳಿಗೆ ಖಾತಾ ಮಾಡಿಕೊಡಲಾಗಿದೆಂದು ದಾಖಲೆಗಳು ದೊರೆತಿವೆ.
ಲಿಂಗಸುಗೂರು ಪಟ್ಟಣದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ನಿವೇಶನ ಮತ್ತು ಉದ್ಯಾನವನಗಳನ್ನು ಅಕ್ರಮವಾಗಿ ನಿವೇಶನಗಳನ್ನಾಗಿ ಪರಿವರ್ತಿಸಿ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿಲ್ಲ. ಅಧಿಕಾರಿ ಅಕ್ರಮ ಮಾಡಿದ್ದರೆ ತನಿಖೆ ನಡಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಡಾ.ಶರಣ ಪ್ರಕಾಶ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವ
ಲಿಂಗಸೂಗೂರು ಪುರಸಭೆಯಲ್ಲಿ ಅಧಿಕಾರಿಗಳು ಸಾರ್ವಜನಿಕ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಮಾರಾಟ ಮಾಡುವುದರ ಜತೆಗೆ ಕಟ್ಟಡ ನಿರ್ಮಾಣ ಮಾಡಲು ಪರವಾನಿಗೆ ನೀಡಲಾಗಿದೆ. ಸಾಕ್ಷಿಗಳೊಂದಿಗೆ ಸರ್ಕಾರಕ್ಕೆ ದೂರು ನೀಡಲಾಗುತ್ತದೆ.
ಮೋಹನ ಗೋಸ್ಲೆ ಸ್ಥಳೀಯರು ಲಿಂಗಸುಗೂರು