ಜಿಲ್ಲೆ

ಆರ್.ಡಿ. ಹೆಗಡೆ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ

ದೀಪಕ ತಲವಾಯಿ

ದಾಂಡೇಲಿ: ಶಿರಸಿಯಲ್ಲಿ ಡಿಸೆಂಬರ್ 3 ಮತ್ತು 4 ರಂದು ಆಯೋಜನೆಯಾಗಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಆರ್.ಡಿ. ಹೆಗಡೆ ಆಲ್ಮನೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶನಿವಾರ ದಾಂಡೇಲಿಯಲ್ಲಿ ಆಯೋಜನೆಯಾಗಿದ್ದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್ . ನಾಯ್ಕ, ಜಾರ್ಜ್ ಫರ್ನಾಂಡಿಸ್, ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತಜಾ ಹುಸೇನ್ ಆನೆಹೊಸೂರ, ತಾಲೂಕು ಘಟಕಗಳ ಅಧ್ಯಕ್ಷರಾದ ಸುಬ್ರಾಯ ಭಟ್ ಬಕ್ಕಳ, ವಿ.ಎ. ಕೋಣಸಾಲಿ, ಸುಬ್ರಹ್ಮಣ್ಯ ಭಟ್, ರಾಮಾ ನಾಯ್ಕ, ಗೋಪಾಲಕೃಷ್ಣ ನಾಯಕ, ಸುಬ್ಬಯ್ಯ ನಾಯ್ಕ, ಎಸ್.ಎಚ್. ಗೌಡ, ನಾರಾಯಣ ನಾಯ್ಕ, ಸುಮಂಗಲಾ ಅಂಗಡಿ, ಪಾಂಡುರಂಗ ಪಟಗಾರ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಂ. ಮುಕ್ರಿ, ಎಸ್.ಜಿ. ಬಿರಾದರ, ಸೀತಾ ದಾನಗೇರಿ ಜೊಯಿಡಾ ಉಪಸ್ಥಿತರಿದ್ದರು.

ಆರ್.ಡಿ. ಹೆಗಡೆಯವರ ಪರಿಚಯ: ಶಿರಸಿ ತಾಲೂಕಿನ ಆಲ್ಮನೆಯ 75 ವರ್ಷದ ಆರ್.ಡಿ. ಹೆಗಡೆ ( ರಘುನಾಥ ದೇವರು ಹೆಗಡೆ) ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದು, ಸಂಸ್ಕೃತ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಸರ್ಕಾರಿ ಪದವಿಪೂರ್ವ ಕಾಲೇಜ್​ನಲ್ಲಿ 17 ವರ್ಷ ಉಪನ್ಯಾಸಕರಾಗಿ , 15 ವರ್ಷ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ, 2007ರಲ್ಲಿ ನಿವೃತ್ತಿಯಾಗಿ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸತ್ಯಮೇವ ಜಯತೆ ಹಾಗೂ ಇತರ ಕಥೆಗಳು, ಪುಟ್ಟ ಗುಲಾಬಿ ಎಂಬ ಕಥಾಸಂಕಲನ, ದಾರಿ ಎಂಬ ಕಾದಂಬರಿ, ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ ಎಂಬ ವಿಚಾರ ಸಾಹಿತ್ಯ, ಉಪನಿಷತ್ತುಗಳು ಅರ್ಥಲೋಕ ಎಂಬ ತತ್ವಶಾಸ್ತ್ರ ಗ್ರಂಥ, ಜೆನ್ ಮಹಾಯಾನ: ಬೌದ್ಧ ತತ್ವಶಾಸ್ತ್ರ, ಕೃತಿ ಚಿತ್ತ ಎಂಬ ಸಾಹಿತ್ಯ ವಿಮರ್ಶೆ, ಸಂಕಥನ ಎಂಬ ಅಂಕಣ ಬರಹ, ಭಾರತದಲ್ಲಿ ಶಿಕ್ಷಣ: ಸವಾಲು ಮತ್ತು ಸಾಧ್ಯತೆ, ಮಾನವ ತತ್ವದ ಸಾರ, ಕಡಲಾಚೆಯ ಕಥೆಗಳು ಎಂಬ ಅನುವಾದ, ತುಂಬಿದ ಬಟ್ಟಲು ಹಾಗೂ ಇತರ ಬರಹಗಳು ಎಂಬ ಸಾಹಿತ್ಯ ಪ್ರಬಂಧಗಳು ಹೀಗೆ ಒಟ್ಟು 20 ಪುಸ್ತಕಗಳು ಇದುವರೆಗೆ ಮುದ್ರಣ ಕಂಡಿವೆ. 30ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳು ಪ್ರಕಟಗೊಂಡಿವೆ.