ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಮಾ. 20ರಂದು ಬೆಳಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಜರುಗಲಿದೆ ಎಂದು ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಕಲಾಧಿಪತಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿರುವರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಸಮಾಜಸೇವೆ ಪರಿಗಣಿಸಿ ದಿ. ಸುರೇಶ್ ಸಿ. ಅಂಗಡಿ (ಮರಣೋತ್ತರ), ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗಾಗಿ ಹಿರಿಯ ವಿದ್ವಾಂಸರು, ಸಾಹಿತಿ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ ಅವರಿಗೆ ಗೌರವಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು ಎಂದರು. ಘಟಿಕೋತ್ಸವದಲ್ಲಿ ಒಟ್ಟು 47,185 ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿಯನ್ನು ಪಡೆದುಕೊಳ್ಳಲಿದ್ದಾರೆ. ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ 11 ಸ್ವರ್ಣ ಪದಕಗಳನ್ನು ನೀಡಲಾಗುವುದು. 27 ಪಿಎಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ 419 ಮಹಾವಿದ್ಯಾಲಯಗಳು ವಿಶ್ವವಿದ್ಯಾಲಯದ ಅಧೀನದಲ್ಲಿ ಸಂಯೋಜನೆಗೊಂಡಿವೆ. ವಿಜಯಪುರ, ಜಮಖಂಡಿಯಲ್ಲಿ ಸ್ನಾತಕೋತ್ತರ ಕೇಂದ್ರಗಳು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆಘಟಕ ಕಾಲೇಜನ್ನು ವಿವಿ ಹೊಂದಿದೆ. ಅಲ್ಲದೇ 49 ಕಾಲೇಜುಗಳಲ್ಲಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. 22 ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಅಧ್ಯಯನ ನಡೆಸುತ್ತಿದ್ದಾರೆ. 665ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ಹಲವು ವಿಷಯಗಳಲ್ಲ್ಲಿ ಪಿಎಚ್.ಡಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ ಎಂದರು. ರಾಜ್ಯ ಸರ್ಕಾರ ಹಿರೇಬಾಗೇವಾಡಿಯ ಮಲ್ಲಪ್ಪನಗುಡ್ಡದ ಬಳಿ 126 ಎಕರೆ 27 ಗುಂಟೆ ನೀಡಿರುವ ಜಮೀನಿನಲ್ಲಿ ಈಗಾಗಲೇ ವಿವಿಯ ಕಾಂಪೌಂಡ್ ಗೋಡೆಯ ನಿರ್ಮಾಣ ಪೂರ್ಣಗೊಂಡಿದ್ದು ಕಟ್ಟಡದ ನಿರ್ಮಾಣ ಕಾರ್ಯವು ತೀವ್ರ ಪ್ರಗತಿಯಲ್ಲಿದೆ ಎಂದರು.
ಚಿನ್ನದ ಪ್ರದಕ ಪ್ರದಾನ:
ವಿದ್ಯಾರ್ಥಿನಿಯರಾದ ಸ್ವೇತಾ ಪಾಟೀಲ, ಶ್ರೀದೇವಿ ಕೆ. ಅರಕೇರಿ, ಶಶಿಕಲಾ ನಿಗರಿ, ಲಕ್ಷ್ಮೀ ಮಗದುಮ್, ಗುರಮ್ಮ ಗುರುಸಿದ್ದಪ್ಪ ಬಳಿಗೇರ, ಪ್ರಿಯಾಂಕ ಮಗದುಮ್ ಅವರಿಗೆ ಸುವರ್ಣ ಪದಕ ನೀಡಲಾಗುವುದು. ವಿಷಯವಾರು ಅತೀ ಹೆಚ್ಚು ಅಂಕ ಗಳಿಸಿದ ಸ್ನಾತಕ ವಿದ್ಯಾರ್ಥಿಗಳಾದ ಮುಸ್ಕಾನ್ ಮುಲ್ಲಾ (ಇಂಗ್ಲಿಷ್), ಸವಿತಾ ಕೊಲ್ಲೆನ್ನವರ (ಕನ್ನಡ), ಕ್ರಾಂತಿ ಪೂಜೇರಿ (ಸಮಾಜಶಾಸ್ತ್ರ), ಪೂಜಾ ಪರಸಣ್ಣವರ (ಕಾಮರ್ಸ್) ಅವರಿಗೆ ಸುವರ್ಣ ಪದಕ ನೀಡಲಾಗುವುದು ಎಂದು ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಹೇಳಿದರು.