ನಾಗರಾಜ ಜೋರಾಪೂರ ಚನ್ನಮ್ಮನ ಕಿತ್ತೂರು
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 2025-26ನೇ ಸಾಲಿನಿಂದ ಪ್ರವೇಶ ಶುಲ್ಕ ಏರಿಕೆ ಮಾಡಿದೆ. ಇದು ವಿದ್ಯಾರ್ಥಿಗಳಿಗೆ ಹೊರೆಯಾಗಿದ್ದು ಅಲ್ಲದೇ ದಾಖಲಾತಿ ಕುಸಿತಕ್ಕೂ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿವರ್ಷಕ್ಕಿಂತ ಈ ವರ್ಷ ಪ್ರವೇಶ ಶುಲ್ಕ ಎರಡು ಪಟ್ಟು ಹೆಚ್ಚಿಸಿದೆ. 3 ಸಾವಿರ ರೂ. ಇದ್ದ ಪ್ರವೇಶ ಶುಲ್ಕ ಈ ಬಾರಿ 7 ಸಾವಿರ ರೂ. ಏರಿಕೆ ಮಾಡಿದೆ. ಅನಿವಾರ್ಯವಾಗಿ ವಿದ್ಯಾರ್ಥಿಗಳು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. 2023-24ರಲ್ಲಿ ಒಂದು ವರ್ಷದ ಶುಲ್ಕ 3 ಸಾವಿ ಪಡೆದಿತ್ತು. ಆದರೆ, ಏಕಾಏಕಿ ಪ್ರವೇಶ ಶುಲ್ಕ ಹೆಚ್ಚಿಸಿರುವುದು ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದೆ.
ಬಡ ವಿದ್ಯಾರ್ಥಿಗಳಿಗೆ ಭಾರವಾದ ಶುಲ್ಕ: ಪ್ರತಿವರ್ಷ ಸ್ನಾತಕೋತ್ತರ ಶಿಕ್ಷಣ ಸರ್ಕಾರಿ ಶುಲ್ಕ ಹಾಗೂ ಕಾಲೇಜು ಶುಲ್ಕ ಸೇರಿ ಐದಾರು ಸಾವಿರ ರೂಪಾಯಿ ಖರ್ಚಿನಲ್ಲಿ ಪೂರೈಸುತ್ತಿದ್ದ ವಿದ್ಯಾರ್ಥಿಗಳಿಗೆ ಈ ಬಾರಿ ಒಂದು ವರ್ಷಕ್ಕೆ ಇತರ ಖರ್ಚಿನೊಂದಿಗೆ 20 ಸಾವಿರದವರೆಗೆ ಹಣ ವೆಚ್ಚ ಮಾಡಬೇಕಾಗುತ್ತದೆ.
ಪ್ರವೇಶ ಕುಸಿತ: ಪ್ರತಿವರ್ಷ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 80 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ, ಈ ವರ್ಷ ಹತ್ತು ಸಾವಿರಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಶುಲ್ಕ ಹೆಚ್ಚಳದಿಂದ ಇಲ್ಲಿ ಪ್ರವೇಶ ಪಡೆಯಬೇಕಿದ್ದ ವಿದ್ಯಾರ್ಥಿಗಳು ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದರಿಂದ ದಾಖಲಾತಿಯಲ್ಲಿ ಭಾರೀ ಕುಸಿತ ಕಾಣುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಬಡ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಪ್ರವೇಶ ಶುಲ್ಕ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆದೇಶ ಹಿನ್ನೆಲೆಯಲ್ಲಿ ಹೆಚ್ಚಳ: 2023ರಲ್ಲಿ ಸರ್ಕಾರ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳು ಪ್ರವೇಶ ಶುಲ್ಕ ಹೆಚ್ಚಳ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಆದರೆ, ಇಲ್ಲಿವರೆಗೂ ಬೇರೆ ವಿವಿಗಳು ಶುಲ್ಕ ಏರಿಕೆ ಮಾಡಿಲ್ಲ. ಆದರೆ, ರಾಣಿ ಚನ್ನಮ್ಮ ವಿವಿ ಮಾತ್ರ ಪ್ರಸಕ್ತ ಸಾಲಿನಿಂದ ದುಪ್ಪಟ್ಟು ಹೆಚ್ಚಳ ಮಾಡಿದೆ. ಇದು ವಿದ್ಯಾರ್ಥಿಗಳಿಗೆ ಹೊರೆಯಾಗಿದೆ.
ಈಗಾಗಲೇ ವಿದ್ಯಾರ್ಥಿಗಳು, ಪಾಲಕರು ಹಾಗೂ ವಿವಿಧ ಸಂಘಟನೆ ಮುಖಂಡರು ಪ್ರವೇಶ ಶುಲ್ಕ ಹೆಚ್ಚಿಸಿರುವ ಕುರಿತು ಸಂಪರ್ಕ ಮಾಡಿದ್ದಾರೆ. ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಇದರ ಬಗ್ಗೆ ಗಂಭೀರವಾಗಿ ಚರ್ಚಿಸಿ ವಿದ್ಯಾರ್ಥಿಗಳ ಪರವಾಗಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಮಹಾಂತೇಶ ಕಂಬಾರ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ --- ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಶುಲ್ಕ ಹೆಚ್ಚಿಸಿಲ್ಲ. ಆದರೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರವೇಶ ಶುಲ್ಕ ದುಪ್ಪಟ್ಟು ಮಾಡಲಾಗಿದೆ. ಶುಲ್ಕ ಹೆಚ್ಚಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಹೊರೆ ಮಾಡಿದೆ. ಅನಿವಾರ್ಯವಾಗಿ ಬೇರೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವಂತಾಗಿದೆ. ಗೀತಾ ಸಂಗೊಳ್ಳಿ , ಆರ್‌ಸಿಯು ಸ್ನಾತಕೋತ್ತರ ವಿದ್ಯಾರ್ಥಿನಿ. ಶುಲ್ಕ ಹೆಚ್ಚಿಸಲು ಸರ್ಕಾರ 2023ರಲ್ಲಿ ಆದೇಶ ಮಾಡಿದೆ. ಅದರಂತೆ ಈ ವರ್ಷದಿಂದ ಶುಲ್ಕ ಹೆಚ್ಚಿಸಿದ್ದೇವೆ. ಇದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಅಷ್ಟೇ ಅಲ್ಲ. ಎಲ್ಲ ವಿಶ್ವವಿದ್ಯಾಲಯಕ್ಕೆ ಆದೇಶ ಮಾಡಲಾಗಿದ್ದು, ಬೇರೆ ವಿಶ್ವವಿದ್ಯಾಲಯಗಳು ಶುಲ್ಕ ಹೆಚ್ಚು ಮಾಡಿಲ್ಲ. ಪ್ರೊ. ಸಿ.ಎಂ. ತ್ಯಾಗರಾಜ ಉಪಕುಲಪತಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ
================
8ಕಿತ್ತೂರು1: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಚಿತ್ರ
8ಕಿತ್ತೂರು1ಎ: ಗೀತಾ ಸಂಗೊಳ್ಳಿ ,
8ಕಿತ್ತೂರು1ಬಿ : ಮಹಾಂತೇಶ ಕಂಬಾರ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ
9ಕಿತ್ತೂರು11: ಸಿ.ಎಂ. ತ್ಯಾಗರಾಜ: