ಬಳ್ಳಾರಿ: ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಫೆ.24ರಂದು ನಗರದ ಗಾಂಧಿ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಸ್.ಶಿವಶಂಕರ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಾಗೂ ಕೃಷಿ ಉತ್ಪನ್ನಗಳ ರಫ್ತು ವಿಚಾರವಾಗಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಪ್ರವಾಸ ಟ್ರಂಪ್ ಹಾಗೂ ಅಮೆರಿಕದ ರೈತರಿಗೆ ಅನುಕೂಲವಾದರೆ ಭಾರತದ ರೈತರ ಮೇಲೆ ದುಷ್ಪರಿಣಾಮ ಬೀರಲಿದೆ. ದೇಶದಲ್ಲಿ 10 ಕೋಟಿ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ಅಮೆರಿಕದೊಂದಿಗಿನ ಪ್ರಾದೇಶಿಕ ಸಮಗ್ರ ಆರ್ಥಿಕತೆ ಹಾಗೂ ಮುಕ್ತ ವ್ಯಾಪಾರ (ಆರ್‌ಸಿಇಪಿ) ಒಪ್ಪಂದದಿಂದ ದೇಶದ ಹೈನುಗಾರಿಕೆ ಹಾಗೂ ಕೋಳಿ ಉದ್ಯಮದ ಮೇಲೆ ಪೆಟ್ಟು ಬೀಳಲಿದೆ. ಆರ್‌ಸಿಇಪಿ ಒಪ್ಪಂದ ಜಾರಿಯಾದರೆ ವಾರ್ಷಿಕ 42 ಸಾವಿರ ಕೋಟಿ ರೂ. ಮೌಲ್ಯದ ಕೃಷಿ ಹಾಗೂ ಹೈನುಗಾರಿಕೆ ಉತ್ಪನ್ನಗಳು ದೇಶಕ್ಕೆ ಆಮದಾಗಲಿವೆ. ಇದರಿಂದಾಗಿ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಶಿವಶಂಕರ ಆಗ್ರಹಿಸಿದರು.