ಯಳಂದೂರು: ಐಪಿಎಲ್‌ನ ಪಂದ್ಯಾವಳಿಯಲ್ಲಿ 18 ವರ್ಷಗಳ ನಂತರ ಆರ್‌ಸಿಬಿ ತಂಡ ಕಪ್ ಗೆದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು.
ಪಟ್ಟಣದ ಕೆಕೆ ರಸ್ತೆ ಹಾಗೂ ಆಶ್ರಯ ಬಡಾವಣೆಯಲ್ಲಿ ದೊಡ್ಡ ಪರದೆಗಳಲ್ಲಿ ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದರು. ಕೊನೆಯ ಓವರ್‌ನಲ್ಲಿ ಗೆಲುವು ನಿಚ್ಚಳವಾಗುತ್ತಿದ್ದಂತೆಯೇ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರಲ್ಲದೆ, ಪಟಾಕಿ ಸಿಡಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರ್‌ಸಿಬಿ ಪರ ಘೋಷಣೆ ಕೂಗುವ ಮೂಲಕ ಯುವಕರ ತಂಡ ಬೈಕ್‌ಗಳಲ್ಲಿ ಸವಾರಿ ಮಾಡಿದರು. ಪಟ್ಟಣದ ಬಸ್ ನಿಲ್ದಾಣ, ಬಳೇಪೇಟೆ ಸರ್ಕಲ್, ಗಾಂಧಿ ಸರ್ಕಲ್, ಎಸ್‌ಬಿಐ ಸರ್ಕಲ್, ಗೌತಮ್ ಬಡಾವಣೆ ಸೇರಿದಂತೆ ಎಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಜತೆಗೆ ರಸ್ತೆಯಲ್ಲೇ ಯುವಕರ ತಂಡದ ನೃತ್ಯ ಮಾಡಿತು. ಎಲ್ಲೆಡೆ ವಿರಾಟ್ ಕೊಹ್ಲಿ, ಆರ್‌ಸಿಬಿ ಪರ ಜಯಘೋಷಗಳು ಮೊಳಗಿದವು.
ತಾಲೂಕಿನಾದ್ಯಂತ ಸಂಭ್ರಮ: ತಾಲೂಕಿನ ಬಿಳಿಗಿರಿರಂಗನಬೆಟ್ಟ, ಗುಂಬಳ್ಳಿ, ಯರಗಂಬಳ್ಳಿ, ಗೌಡಹಳ್ಳಿ, ಹೊನ್ನೂರು, ಕೆಸ್ತೂರು, ಕಂದಹಳ್ಳಿ, ಅಂಬಳೆ, ಗಂಗವಾಡಿ, ಅಗರ-ಮಾಂಬಳ್ಳಿ ಸೇರಿದಂತೆ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು. ಅಲ್ಲಲ್ಲಿ ಆರ್‌ಸಿಬಿಯ ಫ್ಲೆಕ್ಸ್‌ಗಳು ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.