ಸಿದ್ದಾಪುರ: ಮೂರ್ನಾಡು ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ನಾಯ್ಡೂಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಬೈಲಕುಪ್ಪೆ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಫೈನಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಬೈಲಕುಪ್ಪೆ ತಂಡ( 67/0), ವಿರಾಜಪೇಟೆ ಕೊಡಗು ಯುವ ವಾರಿಯರ್ಸ್(66/5) ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಕಿರಣ್ ಅಜೇಯ (48) ಹಾಗೂ ವಿಜಯ್ ಅಜೇಯ(14) ಅವರ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚೊಚ್ಚಲ ನಾಯ್ಡೂಸ್ ಕಪ್ ಗೆದ್ದು ಸಂಭ್ರಮಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಕೊಡಗು ಯೂತ್ ವಾರಿಯರ್ಸ್ ವಿರಾಜಪೇಟೆ ತಂಡ 6 ನಿಗದಿತ ಓವರ್ ನಲ್ಲಿ ಒಟ್ಟು 74 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮೂರ್ನಾಡು ಎಕ್ಸ್ ಟ್ರೀಮ್ ಬ್ಲಾಸ್ಟರ್ಸ್ ತಂಡ ಕೇವಲ 34 ರನ್ ಗಳಿಸಿ ಸೋಲನ್ನಪ್ಪಿತು.
ದ್ವಿತೀಯ ಸೆಮಿಫೈನಲ್‌ನಲ್ಲಿ ಆರ್.ಸಿ.ಬಿ.ಬೈಲುಕುಪ್ಪೆ (64) ತಂಡ ಪೆರುಂಬಾಡಿ ಪ್ಯಾಂಥರ್ಸ್ (62) ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಪಂದ್ಯ ಶ್ರೇಷ್ಠ ಕಿರಣ್ ಬೈಲಕುಪ್ಪೆ, ಸರಣಿ ಪುರುಷೋತ್ತಮ ವಿಜಯ್ ಬೈಲಕುಪ್ಪೆ ಹಾಗೂ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಕೊಡಗು ಯೂತ್ ವಾರಿಯರ್ಸ್ ತಂಡದ ಚೇತನ್ ಗೆದ್ದುಕೊಂಡರು.
ತೀರ್ಪುಗಾರರಾಗಿ ವೆಂಕಟೇಶ್, ಪ್ರತಾಪ್ ಲವ್ಲಿ ಹಾಗೂ ಸ್ಕೋರರ್ ಆಗಿ ಮೋಹಿತ್-ಲಿತಿನ್ ದಾಸ್, ವೀಕ್ಷಕ ವಿವರಣೆಗಾರರಾಗಿ ಟಿ.ವಿ.ಲೋಕೇಶ್, ಟಿ.ಎನ್.ಮಂಜುನಾಥ್ , ನಿರೂಪಣೆಯನ್ನು ನಿರ್ಮಲಾ ವಿಜಯ್ ನಿರ್ವಹಿಸಿದರು.
ಸಮಾರೋಪ ಸಮಾರಂಭದಲ್ಲಿ ಟಿ.ಪಿ.ರಮೇಶ್ ಮಾತನಾಡಿ, ಕ್ರೀಡೆ ಎಲ್ಲರನ್ನೂ ಒಂದುಗೂಡುವಂತೆ ಮಾಡುತ್ತದೆ. ಕೊಡಗು ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳು ಕ್ರೀಡೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಬಲಿಜ ಸಮುದಾಯವೂ ಪ್ರತಿವರ್ಷ ಕ್ರೀಡಾಕೂಟವನ್ನು ನಡೆಸಬೇಕು. ಮಹಿಳೆಯರು, ಬಾಲಕ, ಬಾಲಕಿಯರು, ಯುವತಿಯರೂ ಕ್ರೀಡೆಯಲ್ಲಿ ತೊಡಗಲು ಕಾರ್ಯಕ್ರಮ ಹಾಕಿಕೊಳ್ಳಬೇಕು. ಮುಂದಿನ ವರ್ಷ ನಾಯ್ಡೂಸ್ ಕ್ರಿಕೆಟ್ ಮೊದಲ ಬಹುಮಾನವನ್ನು ಪ್ರಾಯೋಜಿಸುವುದಾಗಿ ಬಲಿಜ ಮುಖಂಡರಾದ ಟಿ.ಪಿ.ರಮೇಶ್ ಘೋಷಣೆ ಮಾಡಿದರು.
ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಮಾತನಾಡಿ, ಬಲಿಜ ಜನಾಂಗದಲ್ಲಿಯೂ ಕ್ರೀಡಾ ಪ್ರತಿಭೆಗಳಿದ್ದು ಯುವಕ, ಯುವತಿಯರು ಹೆಚ್ಚಾಗಿ ಪಾಲ್ಗೊಳ್ಳಲು ಸಲಹೆ ನೀಡಿದರು.
ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ಕ್ರಿಕೆಟ್ ತಂಡ ಯುವಕರಿಗೆ ಸೀಮಿತವಾಗದೆ ಯುವತಿಯರು, ಹಿರಿಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಡೆಸುವಂತಾಗಬೇಕು. ಮುಂದಿನ ವರ್ಷ ಜಿಲ್ಲೆಯ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಂಘಟಕರಾದ ಮೂರ್ನಾಡು ಶ್ರೀನಿವಾಸ್, ಹರ್ಷ, ವಿನೋದ್, ಚೇತನ್ ಮತ್ತು ತಂಡ ಪ್ರಚಾರಪಡಿಸಲು ಮನವಿ ಮಾಡಿದರು.
ವಿವಾಹಿತ ಮಹಿಳೆಯರ ಸಂಗೀತ ಕುರ್ಚಿ ವಿಭಾಗದಲ್ಲಿ ಆಶಾ ರಮೇಶ್ ಪೆರುಂಬಾಡಿ(ಪ್ರಥಮ), ಟಿ.ಪಿ.ಶಶಿಕಲಾ, ಮೈಸೂರು(ದ್ವಿತೀಯ), ಯುವತಿಯರ ವಿಭಾಗದಲ್ಲಿ ಜಸ್ಮಿತಾ ರಮೇಶ್ ಪೆರುಂಬಾಡಿ(ಪ್ರಥಮ) ಹಾಗೂ ನವ್ಯಶ್ರೀ ವಿರಾಜಪೇಟೆ ದ್ವಿತೀಯ ಬಹುಮಾನ ಗೆದ್ದುಕೊಂಡರು. ಹೆಣ್ಣುಮಕ್ಕಳ ಜಿಗ್ ಜಾಗ್ ಸ್ಪರ್ಧೆಯಲ್ಲಿ ಪ್ರಿಯಾ ರಂಜನ್, ಮೈಸೂರು (ಪ್ರಥಮ) ಹಾಗೂ ರಚನಾ ಪ್ರಕಾಶ್, ಮೈಸೂರು(ದ್ವಿತೀಯ) ಬಹುಮಾನ ಗೆದ್ದುಕೊಂಡರು.
ಮುಖ್ಯ ಅತಿಥಿಗಳಾಗಿ ರೋಹಿತ್ ಆನಂದ್, ಎಂ.ಎಸ್.ಆಶಾ, ಪದ್ಮನಾಭ ನಾಯ್ಡು, ಲೋಹಿತ್ ನಾಯ್ಡು, ಗಣೇಶ್ ನಾಯ್ಡು, ಮೀನಾಕ್ಷಿ ಕೇಶವ್, ಸುಶೀಲಾ, ಟಿ.ಎನ್.ಲೋಕನಾಥ್, ರಾಮಚಂದ್ರ, ಟಿ.ಎಚ್.ಮಂಜುನಾಥ್ ಇತರರು ಇದ್ದರು.