ಮಂಡ್ಯ: ಐತಿಹಾಸಿಕ ಹೆಸರಿರುವ ರೈತ ಸಭಾಂಗಣವನ್ನು ಆಧುನಿಕವಾಗಿ ಪುನಶ್ಚೇತನಗೊಳಿಸಿ ವಿನ್ಯಾಸಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್‌ಗೆ ಮನವಿ ಸಲ್ಲಿಸಲಾಯಿತು.
ರೈತ ನಾಯಕರಾದ ಸುನಂದಾ ಜಯರಾಂ ಹಾಗೂ ಕೆ.ಬೋರಯ್ಯ ನೇತೃತ್ವದಲ್ಲಿ ಭೇಟಿ ನೀಡಿದ ಸದಸ್ಯರು, ಮಂಡ್ಯ ನಗರದಲ್ಲಿ 60-70ರ ದಶಕದಲ್ಲಿ ಜಿಲ್ಲೆಯ ಸಹಕಾರಿ ಧುರೀಣರಿಂದ ಸ್ಥಾಪಿತವಾದ ರಾಜ್ಯದ ಹೆಸರಾಂತ ಐತಿಹಾಸಿಕ ರೈತ ಸಭಾಂಗಣ ತುಂಬ ಶೋಚನೀಯ ಸ್ಥಿತಿಯಲ್ಲಿದೆ. ಜಿಲ್ಲೆಯ ಪಾರಂಪರಿಕತೆಗೆ ಹೆಸರಾಗಿರುವ ರೈತ ಸಭಾಂಗಣದ ಈ ಸ್ಥಿತಿ ಮಂಡ್ಯ ಜಿಲ್ಲೆ, ರೈತರು, ಆರ್‌ಎಪಿಸಿಎಂಎಸ್ ಸಂಸ್ಥೆಗೆ ತುಂಬಾ ಅಗೌರವ ತರುವಂತಹ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಗಣ್ಯರು ಸಭಾಂಗಣಕ್ಕೆ ಭೇಟಿ ನೀಡಿ, ಸಭಾಂಗಣದ ವಿನ್ಯಾಸ, ಸೌಂದರ್ಯವನ್ನು ಪ್ರಶಂಸಿದ್ದಾರೆ. ಜಿಲ್ಲೆಯ ಗೌರವದ ಸಂಕೇತವಾಗಿರುವ ಸಭಾಂಗಣವನ್ನು ಪುನಶ್ಚೇತನಗೊಳಿಸಿ ಉಳಿಸುವುದು ಸಂಘದ ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಈ ಸಂಬಂಧ ರೈತ ಸಭಾಂಗಣವನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಬೇಕೆಂದು ಒತ್ತಾಯಿಸಿದರು.
ಸಮಿತಿಯ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಸುಧೀರ್‌ಕುಮಾರ್, ಲಂಕೇಶ್ ಮಂಗಲ, ಬೋರಲಿಂಗೇಗೌಡ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ತೂಬಿನಕೆರೆ ಲಿಂಗರಾಜು ಇತರರಿದ್ದರು.