ಜಿಲ್ಲೆ

ಮನ್ಮುಲ್ ಹಗರಣದ ತನಿಖೆಯನ್ನು ಸಿಬಿಐಗೊಪ್ಪಿಸಿ: ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದಲ್ಲಿ ನಡೆದಿರುವ ಹಾಲಿಗೆ ನೀರು ಮಿಶ್ರಣ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ರೈತ ಸಂಘದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘದ ಕಾರ್ಯಕರ್ತರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗಿದರು. ಅಂತೆಯೇ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ರವಾನಿಸಿದರು. ಹಾಲಿಗೆ ನೀರಿನ ಮಿಶ್ರಣದ ಹಗರಣದ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಿದರೂ ಯಾವುದೇ ಸತ್ಯಾಂಶ ಹೊರಬೀಳುವ ಸಾಧ್ಯತೆ ಇಲ್ಲ. ಆದ್ದರಿಂದ ಉನ್ನತಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದರು. ಅಂತೆಯೇ ಮನ್‌ಮುಲ್‌ನಲ್ಲಿ ಹಿಂದೆ ನಡೆದಿರುವ 72 ಕೋಟಿ ರೂಗಳ ದುರುಪಯೋಗದ ಹಣವನ್ನು ನ್ಯಾಯಾಲಯದ ಆದೇಶದಂತೆ ವಸೂಲಿ ಮಾಡಲು ಸರ್ಕಾರ ಸಂಬಂಧಪಟ್ಟರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಅಂತೆಯೇ ಕೃಷಿ ಬೆಲೆ ಆಯೋಗಕ್ಕೆ ಶಾಸನಬದ್ಧ ಅಧಿಕಾರವನ್ನು ನೀಡಬೇಕು. ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ ಕನಿಷ್ಟ 500 ರೂ ಪ್ರೋತ್ಸಾಹಧನ ಘೋಷಿಸಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿಪಡಿಸುವುದರ ಜತೆಗೆ ಪ್ರೋತ್ಸಾಹಧನ ಹೆಚ್ಚಿಸಬೇಕು. ಹಗಲು ವೇಳೆ ಗುಣಮಟ್ಟದ ಕನಿಷ್ಟ 8 ಗಂಟೆ ತ್ರಿ ಫೇಸ್ ವಿದ್ಯುತ್‌ನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಬೇಕು. ಜತೆಗೆ ಪಂಪ್‌ಸೆಟ್‌ಗಳಿಗೆ ಆಧಾರ್‌ಕಾರ್ಡ್ ಜೋಡಣೆಯ ಕ್ರಮವನ್ನು ಕೈಬಿಡಬೇಕು. ವಿದ್ಯುತ್‌ಶುಲ್ಕವನ್ನು ಗೃಹಬಳಕೆಗೆ ಕನಿಷ್ಟ 85 ರೂನಿಂದ 110 ರೂಗೆ ಹೆಚ್ಚಿಸಿರುವ ಸ್ಲಾೃಬ್‌ಗಳನ್ನು ತೆಗೆದು ಒಂದೇ ದರ ನಿಗದಿಗೊಳಿಸಿರುವುದನ್ನು ರದ್ದುಪಡಿಸುವುದರ ಜತೆಗೆ ಹಿಂದೆ ಇದ್ದಂತಹ ಶುಲ್ಕದ ರೀತಿಯೇ ಮುಂದುವರೆಸಬೇಕೆಂದು ಒತ್ತಾಯಿಸಿದರು.

ಇನ್ನು ರೈತರಿಗೆ ಅನುಕೂಲವಾಗುವಂತೆ ವರ್ಷಪೂರ್ತಿ ಕಾಯಂ ಆಗಿ ಭತ್ತ, ರಾಗಿ ಖರೀದಿ ಕೇಂದ್ರ ತೆರೆಯಬೇಕು. ಮಾತ್ರವಲ್ಲದೆ ಈಗ ಚಾಲ್ತಿಯಲ್ಲಿರುವಂತೆ ಮೂರು ಜಿಲ್ಲೆಗಳಲ್ಲಿ ಭತ್ತಕ್ಕೆ ನೀಡುತ್ತಿರುವ ಪ್ರೋತ್ಸಾಹಧವನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಜತೆಗೆ ಖರೀದಿಸಿದ ಭತ್ತ, ರಾಗಿಯ ಹಣವನ್ನು ರೈತರಿಗೆ ಸಕಾಲದಲ್ಲಿ ಪಾವತಿಸಬೇಕು. ಜಿಲ್ಲೆಯಲ್ಲಿರುವ ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಯ ಆಸ್ತಿಯನ್ನು ಬೇರೆ ಇಲಾಖೆಗೆ ಮಂಜೂರು ಮಾಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು. ಇದರೊಟ್ಟಿಗೆ ವರ್ಷಪೂರ್ತಿ ಇರುವಂತೆ ಕೊಬ್ಬರಿ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ರಾಜ್ಯಸರ್ಕಾರ ಕನಿಷ್ಟ 2 ಸಾವಿರ ರೂ ಪ್ರೋತ್ಸಾಹಧನ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಬಿ.ಬೊಮ್ಮೇಗೌಡ, ರವಿಕುಮಾರ್, ಬಾಲಕೃಷಂ, ಶಂಕರ್, ದೇವರಾಜು, ಕೃಷ್ಣೇಗೌಡ, ವರದರಾಜು, ಅಶೋಕ್ ಗೂಳೂರು, ಕೋಣನಹಳ್ಳಿ ಮಂಜು ಇತರರಿದ್ದರು.