ಜಿಲ್ಲೆ

ಬೆಳೆ ಉಳಿಸಿಕೊಳ್ಳಲು ನೀರು ಕೊಡಿ: ಕಾವೇರಿ ನಿಗಮ ಕಚೇರಿ ಎದುರು ರೈತರ ಪ್ರತಿಭಟನೆ

ಮಂಡ್ಯ: ಮಳೆಯಾಗದ ಪರಿಣಾಮ ಜಮೀನಿನಲ್ಲಿಯೇ ಒಣಗುತ್ತಿರುವ ಕಬ್ಬು ಬೆಳೆಯನ್ನು ಉಳಿಸಿಕೊಳ್ಳಲು ಕೂಡಲೇ ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದ ಕಾವೇರಿ ನೀರಾವರಿ ನಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಬ್ಬು ಒಣಗುತ್ತಿರುವುದರಿಂದ ಇಳುವರಿ ಕಡಿಮೆಯಾಗಿ ಈಗಾಗಲೇ ರೈತರು ನಷ್ಟ ಅನುಭವಿಸುವಂತಾಗಿದೆ. ಉಳಿದ ಬೆಳೆಯನ್ನು ಉಳಿಸಿಕೊಳ್ಳುವುದಕ್ಕಾದರೂ ತಕ್ಷಣವೇ ನೀರು ಹರಿಸಬೇಕು. ಜಿಲ್ಲೆಯಲ್ಲಿ ಸುಮಾರು 45 ಸಾವಿರ ಹೆಕ್ಟೇರ್ ಕಬ್ಬು ಬೆಳೆದು ನಿಂತಿದೆ. ಇದನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ನಾಲೆಗಳಿಗೆ ನೀರು ಬಿಡಬೇಕು ಎಂಬ ಆಗ್ರಹ ಮಾಡುತ್ತಿದ್ದರೂ ರಾಜ್ಯಸರ್ಕಾರ ನಿರ್ಲಕ್ಷೃ ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಪ್ರತಿ ಲೀಟರ್ ಹಾಲಿಗೆ 1.75 ರೂ ಕಡಿಮೆ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಬೇಸಿಗೆ ಸಮಯದಲ್ಲಿ ರೈತರಿಗೆ ಹಾಲು ಕಡಿಮೆ ಸಿಕ್ಕಿದೆ. ಈ ನಷ್ಟವನ್ನೇ ಸರಿದೂಗಿಸಲು ಆಗದೇ ರೈತರು ಕಂಗಲಾಗಿದ್ದಾರೆ. ಸರ್ಕಾರಕ್ಕೆ ರೈತರ ಪರ ಕಾಳಜಿ ಇದ್ದರೇ ಈ ಹಿಂದಿನ ಹಾಲಿನ ದರ ಜಾರಿಗೆ ತರಬೇಕು. ಕಡಿಮೆ ಮಾಡಿರುವ ಆದೇಶವನ್ನು ರದ್ದು ಮಾಡದೇ ಹೋದರೇ ಮನ್‌ಮುಲ್ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸರ್ಕಾರಕ್ಕೆ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಸಭೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ನಿರ್ಧರಿಸಿದ್ದಾರೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. ಆದರೆ ಇಲ್ಲಿವರೆಗೂ ಸರ್ಕಾರಕ್ಕೆ ವರದಿ ಕಳುಹಿಸುವುದರಲ್ಲೇ ಕಾಲಾಹರಣ ಮಾಡದೇ ನೀರು ಬಿಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ರೈತರು ಬೀದಿಗಿಳಿಯುವುದನ್ನು ತಪ್ಪಿಸಿ ಅವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಲಿಂಗಪ್ಪಾಜಿ, ವಿಜಯ್‌ಕುಮಾರ್, ಲತಾ ಶಂಕರ್, ಕೋಣನಹಳ್ಳಿ ಮಂಜು, ರವಿಕುಮಾರ್, ಬಿ.ಎಸ್.ರಮೇಶ್, ಇಂಡುವಾಳು ಸಿದ್ದೇಗೌಡ, ಬೊಮ್ಮೇಗೌಡ, ಕನ್ನಲಿ ಕೃಷ್ಣ, ಶಿವಳ್ಳಿ ಚಂದ್ರು, ಹೊಳಲು ನಾಗರಾಜು ಇತರರಿದ್ದರು.