ಮಂಡ್ಯ: ನಗರದ ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬೈಕ್ ರ‌್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಮತ್ತು ಮುಖಂಡ ಪ್ರಸನ್ನ ಎನ್.ಗೌಡ ನೇತೃತ್ವದಲ್ಲಿ ನಗರದ ಅರ್ಕೇಶ್ವರ ದೇವಾಲಯದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಗುತ್ತಲು ರಸ್ತೆ, ಸಕ್ಕರೆ ವೃತ್ತ, ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ವಿ.ವಿ ರಸ್ತೆ, ಹೊಸಹಳ್ಳಿ ರಸ್ತೆ, ನೂರಡಿ ರಸ್ತೆ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ತೆರಳಿ ಮಹಾವೀರ ವೃತ್ತದ ಮೂಲಕ ನಗರಸಭಾ ಕಚೇರಿಗೆ ತೆರಳಿ ಮುತ್ತಿಗೆ ಹಾಕಿದರು. ನಂತರ ಕೆಲ ಕಾಲ ಧರಣಿ ನಡೆಸಿದ ಬಳಿಕ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಅವರಿಗೆ ಒತ್ತಾಯದ ಮನವಿ ಸಲ್ಲಿಸಿದರು.
ಎಸ್.ಸಿ.ಮಧುಚಂದನ್ ಮಾತನಾಡಿ, ರಸ್ತೆಗಳು ಗುಂಡಿ ಬಿದ್ದಿರುವುದಕ್ಕೆ ಮಳೆಯೂ ಒಂದು ಕಾರಣವಿರಬಹುದು. ಅದೇ ಬಹುಮುಖ್ಯ ಕಾರಣವೇನಲ್ಲ. ಹತ್ತಿಪ್ಪತ್ತು ವರ್ಷದಿಂದಲೂ ನಗರದ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಜಿಲ್ಲಾ ಕೇಂದ್ರವಾದ ಮಂಡ್ಯ ನಗರದ ರಸ್ತೆಗಳಿಗೆ ಹೋಲಿಸಿದರೆ ತಾಲೂಕು ರಸ್ತೆಗಳು ಉತ್ತಮ ಸ್ಥಿತಿಯಲ್ಲಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ದೂರಿದರು.
ರಸ್ತೆಗಳು ಹಾಳಾಗಿರುವುದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಅಸಮರ್ಥತೆಯೇ ಮುಖ್ಯ ಕಾರಣ. ನಗರದ ಶೇ.90ರಷ್ಟು ರಸ್ತೆಗಳು ಹೊಂಡಗಳಾಗಿ ಪರಿವರ್ತನೆಗೊಂಡಿವೆ. ಮಳೆ ಬಂದಾಗ ರಸ್ತೆಗಳು ಮಿನಿ ಕೆರೆಗಳಂತಾಗುತ್ತವೆ. ಆ ಸಮಯದಲ್ಲಿ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದೆ ಗುಂಡಿಗೆ ಬಿದ್ದು ಎಷ್ಟೋ ಜನರಿಗೆ ಗಾಯಗಳಾಗಿವೆ ಎಂದು ಆಪಾದಿಸಿದರು.
ಮಂಡ್ಯ ಒಂದು ದುರದೃಷ್ಟ ನಗರ. ನಗರದ ಬೆಳವಣಿಗೆಗಳ ಪೂರಕವಾದ ಮೂಲ ಸೌಲಭ್ಯಗಳೇ ಇಲ್ಲಿಲ್ಲ. ಒಳಚರಂಡಿಯ ಮ್ಯಾನ್‌ಹೋಲ್‌ಗಳು ತುಂಬಿ ಹರಿಯುತ್ತಿವೆ. ಕಸ-ಕಡ್ಡಿಗಳಿಂದ ತುಂಬಿ ಚರಂಡಿಗಳು ಕಟ್ಟಿಕೊಂಡಿವೆ. ಉದ್ಯಾನಗಳು ನಿರ್ವಹಣೆಯಿಲ್ಲದೆ, ಮೂಲಸೌಕರ್ಯಗಳನ್ನು ಕಾಣದೆ ಕಾಡಿನಂತಾಗಿವೆ. ನೀರು ಪೂರೈಕೆ ಅಸಮರ್ಪಕವಾಗಿದ್ದರೂ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಅಸಮರ್ಥ ಶಾಸಕರು, ಬೇಜವಾಬ್ದಾರಿಯುತ ಜಿಲ್ಲಾ ಮಂತ್ರಿಗಳು, ಹದಗೆಟ್ಟ ನಗರಸಭೆ ಆಡಳಿತದಿಂದ ನಗರ ಅಭಿವೃದ್ಧಿಯಿಂದ ವಂಚಿತವಾಗುವಂತಾಗಿದೆ ಎಂದು ಕಿಡಿಕಾರಿದರು.
ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ನಲ್ಲಿಗಳಿಗೆ ಮೀಟರ್ ಅಳವಡಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಶುದ್ಧ ನೀರು ಒದಗಿಸುವುದು ನಗರಸಭೆಯ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಮೀಟರ್ ಅಳವಡಿಕೆ ಅವೈಜ್ಞಾನಿಕವಾಗಿದೆ ಎಂದು ದೂರಿದರು.
ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಪ್ಪಾಜಿ, ಕಾರ್ಯದರ್ಶಿ ಎಸ್.ಕೆ.ರವಿಕುಮಾರ್, ಶಿವು, ಚಂದ್ರು, ವಿದ್ಯಾಶಂಕರ, ರಮೇಶ್, ಲತಾ ಶಂಕರ್, ನಾಗರೇವಕ್ಕ ಇತರರಿದ್ದರು.